ಇವತ್ತು ಬೆಳಿಗ್ಗೆ ನಿತಿನ ಕಾಲ್ ಮಾಡಿದ್ದ. ವಾರದ ಹಿಂದೆ ಅವನ ಶಾರ್ಟ್ ಫಿಲ್ಮ್ ಸ್ಕ್ರಿಪ್ಟ್ ಕಳ್ಸಿದ್ದ. ಇನ್ನೆರಡು ವಾರದಲ್ಲಿ ಶೂಟ್ ಮಾಡ್ಬೇಕು ಮಗಾ, ಓದಿ ಫೀಡ್‌ಬ್ಯಾಕ್ ಕೊಡು ಅಂತ ನಾಲ್ಕನೇ ಸರ್ತಿ ನೆನಪಿಸಿದ. ಆಯ್ತು ಮಗಾ ಇವತ್ತು ತಲೆ ಮೇಲ್ ತಲೆ ಹೋಗ್ಲಿ ಓದಿ ಸಂಜೆ ಕಾಲ್ ಮಾಡ್ತೀನಿ ಅಂದು ನಾನು ಫೋನ್ ಇಡುತ್ಲೂ ನನ್ನ ರೂಮಲ್ಲಿ ಶೆಲ್ಫ್ ಮೇಲಿದ್ದ ಫ್ರಾಂಝ್ ಕಾಫ್ಕಾನ 'The Metamorphosis' ಕಿಸಿಕಿಸಿ ನಕ್ಕು "ಅವ್ನು ಓದ್ದಂಗೆ ನೀನ್ ಕೇಳ್ದಂಗೆ" ಅಂತು. ನನಿಗೆ ಮೈಯೆಲ್ಲಾ ಉರೀತು. ಈ ಕಾಪಿರೈಟ್ ಮುಗ್ದಿರೋ, ಚೀಪ್ ಪೇಪರಲ್ಲಿ ಪ್ರಿಂಟ್ ಮಾಡಿರೋ ಈ ತುಕಾಲಿ ಪುಸ್ತಕಕ್ಕೆ ದುಡ್ಡು ಕೊಟ್ಟ ತಂದ ನಂಗೇ ಉಲ್ಟಾ ಮಾತಾಡೋ ಅಷ್ಟು ಸೊಕ್ಕಾ?
"ಅಲ್ಲಾ ಗುರು ಏನೋ ಬ್ಲಾಸಮ್ ಬುಕ್ ಹೌಸಲ್ಲಿದಿಯ, ರೇಟ್ ಬೇರೆ ಕಮ್ಮಿ ಅಂತ ತಂದಿದ್ದು. ನಾನೇನ್ ನಿನ್ನ ಕಟ್ಕೊತೀನಿ ಅಂತ ಅಗ್ರೀಮೆಂಟ್ ಮಾಡ್ಕೊಂಡಿದೀನಾ? ‘Kafkaesque’ ಅನ್ನೋದು ಇವಾಗ ಪಾಪ್ ಕಲ್ಚರಲ್ಲೇ ಸೇರ್ಕೊಂಡಿದೆ. ನಿನ್ನ ಓದಿನೇ ತಿಳ್ಕೊಬೇಕು ಅಂತೇನಿಲ್ಲ. ಯಜಮಾನಂಗೆ ಎದುರು ಮಾತೋಡೋದು ಬಿಟ್ಟು ಮುಚ್ಕೊಂಡು ಮೂಲೇಲಿ ಬಿದ್ದಿರು" ಅಂತ ಗದರಿದೆ.
The Metamorphosis ಬೈಂಡ್ ಮೇಲೆ ಕೈ ಹಾಕಿ ಹಿಂದಿನಿಂದ ಇಣುಕಿದ ಬಾಬ್ ಡಿಲನ್‌ನ ‘Chronicles’ ಇನ್ನೊಂದ್ಸಲ ಬೊಗಳು ಹಲ್ಕಾ ನನ್ಮಗನೆ ಎನ್ನುವಂತೆ ಸ್ವಲ್ಪ ಹೊತ್ತು ನನ್ನ ಗುರಾಯಿಸಿತು. ಇದನ್ನ ಫ್ಲಿಪ್‌ಕಾರ್ಟಿಂದ ಆರ್ಡರ್ ಮಾಡಿ ಏಳೆಂಟು ದಿನ ಕಾದು ತರಿಸಿಕೊಂಡಿದ್ದೆ. ಒಂದೆರಡು ಪೇಜ್ ಓದಿ ಇನ್ಸ್ಟಾಗ್ರಾಮಲ್ಲಿ ಸ್ಟೋರಿ ಬೇರೆ ಪೋಸ್ಟ್ ಮಾಡಿಬಿಟ್ಟಿದ್ದೆ. ಆ ವಿಷಯಾನೆಲ್ಲ ತೆಗೆದು ಶೆಲ್ಫಲ್ಲಿರೋ ಬುಕ್ಸ್ ಮುಂದೆಲ್ಲಾ ನನ್ನ ಮಾನ ತೆಗೆದರೆ ಏನಪ್ಪಾ ಮಾಡೋದು ಅಂತ ನಂಗೆ ಅಂಜಿಕೆಯಾಯ್ತು. ಆದ್ರೆ ‘Chronicles’ ಸ್ಪೈನಲ್ಲಿ ಇದ್ದಿದ್ದೇ ಬೇರೆ.
"ಲೇ ಗೂಬೆ. ನಾನ್ ಇಲ್ಲಿಗೆ ಬಂದು ಮನೆ ಮಾಡಿದ್ಮೇಲೇನೆ ಆ ಕರ್ವಾಲೋನ ಎರ್ಡ್ ಸಲ ಓದಿದೀಯ. ನಿಮ್ಮ ಸಿನಿಮಾ ಆಫೀಸಲ್ಲಿ ಮತ್ತೆ 'ಅಣ್ಣನ ನೆನಪು' ಓದ್ದೆ ಅಂತ ನನ್ನ ಟ್ವಿಟ್ಟರ್ ಫ್ರೆಂಡ್ಸ್ ಟೆಕ್ಸ್ಟ್ ಮಾಡಿದ್ರು. ಅಂತದ್ರಲ್ಲಿ ನಾನೂರುಪಾಯಿ ಕೊಟ್ಟು ನನ್ನ ತರ್ಸಿ ಓದ್ದೆ ಧೂಳ್ ತಿನ್ನುಸ್ತಾ ಇದೀಯಲ್ಲ ನೀನ್ ಉದ್ಧಾರ ಆಗ್ತೀಯಾ" ಅಂತು.
ಎಲ್ಲಾ ಲಾಜಿಕಲ್ ಪಾಯಿಂಟ್ಸ್ ಮಾತಾಡಿದ್ರೆ ವಾದ ಮಾಡೋದು ಕಷ್ಟ. ಆದ್ರೂ ನಾನು ಮೀಸೆ ಮಣ್ಣಾಗಲಿಲ್ಲ ಅನ್ನೋ ತರ "ಸ್ವಾಮಿ ನಾನು ದಿನಾ ಹೊತ್ತು ಮೂಡಿದ್ರೆ ನಿಮ್ಮಪ್ಪ ಬಾಬ್ ಡಿಲನ್‌ದು ನಾಕ್ ಹಾಡ್ ಕೇಳ್ತೀನಿ. ಮೊನ್ನೆ ಸ್ಪಾಟಿಫೈ wrappedನಲ್ಲಿ ಟಾಪ್ 5 ಆರ್ಟಿಸ್ಟ್ಸ್ ಅಲ್ಲಿ ಅವ್ನೂ ಇದ್ದ. ಅಷ್ಟು ಅಭಿಮಾನ ಇಲ್ದಿದ್ರೆ ನಿನ್ನ ಯಾಕ್ ದತ್ತು ತಗೊಂತಿದ್ದೆ. ಸ್ವಲ್ಪ ಹಾಳೆ ಬಿಗಿ ಹಿಡಿದು ಮಾತಾಡು" ಅಂದೆ. ನನ್ನ ವಾದ ನನಿಗೇ ಶಾಟದ್ ತರ ಅನ್ನುಸ್ತು. ನಾನು ಏನ್ ಮಾತಾಡ್ಲಿ ಅಂತ ಯೋಚನೆ ಮಾಡುತ್ತಿರುವಷ್ಟರಲ್ಲಿ ಮತ್ತೊಂದು ವಯಸ್ಸಾದ ಕುಗ್ಗಿದ ದನಿ ಕೇಳಿತು. ಕುಂ ವೀರಭದ್ರಪ್ಪ ಅವರ "ಪಕ್ಷಿಗಳು".
"ಮುಚ್ರಲೇ. ನಿನ್ನೆ ಮೊನ್ನೆ ಬಂದು ನೀವೇ ಇಷ್ಟು ನಿಗ್ರಾಡ್ತೀರಲ್ಲ; ಈ ಸುವ್ವರ್ ನನ್ಮಗ ನನ್ನ ದಾವಣಗೆರೆ ಲೈಬ್ರರಿಯಿಂದ 2013ರಲ್ಲಿ ತಗೊಂಡ್ ಬಂದೋನು ಇನ್ನೂ ಕವರ್ ಪೇಜೂ ಓಪನ್ ಮಾಡಿಲ್ಲ. ನಿಯತ್ತಾಗಿ ವಾಪಸ್ಸಾದ್ರೂ ಕೊಟ್ಟಿದ್ರೆ ಇಷ್ಟೊತ್ಗೆ ಒಂದೈವತ್ತು ಮಂದಿಯಾದ್ರೂ ಓದ್ತಿರ್ಲಿಲ್ವ ನನ್ನ? ಒಂದ್ ಲೆಕ್ಕದಲ್ಲಿ ನಾನು ಸೆರೆಯಾಳು ಇಲ್ಲಿ. ನನ್ನ್ ಕಷ್ಟ ಯಾರಿಗೇಳನ?" ಅಂದು ಅದು ಬಂದಿದ್ದ ಮೂಲೆಗೆ ಮತ್ತೆ ಹೋಗಿ ಮಕಾಡೆ ಮಲಗಿ ಬಿಕ್ಕತೊಡಗಿತು. ಅಲ್ಲೇ ಪಕ್ಕದಲ್ಲಿದ್ದ ಒಂದೆರಡು ಹೊಸ ಪುಸ್ತಕಗಳು ಆ ಕಡೆ ಈ ಕಡೆ ತೂರಾಡ್ತಾ ಆ ಮುದಿ ಪುಸ್ತಕಕ್ಕೆ ಗಾಳಿ ಬೀಸತೊಡಗಿದವು. ಇವತ್ತು ಯಾವ ಮಗ್ಗುಲಲ್ಲಿ ಎದ್ನಪ್ಪಾ ಅಂತ ನಾನು "ಆಯ್ತು ಬಿಡ್ರೋ ಇನ್ನೇನು ಜನವರಿ ಬಂತು. ಓದ್ದಿರೋ ಪುಸ್ತಕಾನೆಲ್ಲ ಓದೋದನ್ನೇ ಹೊಸ ವರ್ಷದ ರೆಸಲ್ಯೂಷನ್ ಮಾಡ್ಕೋತೀನಿ" ಅಂದೆ. ರೆಸಲ್ಯೂಷನ್ ಅಂದಕೂಡ್ಲೇ ಶೆಲ್ಫ್ ಮೇಲಿದ್ದ ಪುಸ್ತಕಗಳೆಲ್ಲಾ ಬೆಚ್ಚಿಬಿದ್ದು "ಅಣ್ಣಾ ನೀನು ಬೇಕಾದ್ರೆ ನಮ್ಮನ್ನೆಲ್ಲಾ ಹರಿದು ಮಂಡಕ್ಕಿ ತಿನ್ನೋಕೆ ಯೂಸ್ ಮಾಡು. ಆದ್ರೆ ರೆಸಲ್ಯೂಷನ್ ಅನ್ನೋ ಪದ ಮಾತ್ರ ಎತ್ತಬೇಡ" ಅಂತ ಹಣೆ ನೆಲಕ್ಕೆ ಮುಟ್ಟುವಂತೆ ನೆಲಕ್ಕೆ ಬಿದ್ದು ಅಂಗಲಾಚತೊಡಗಿದವು.
ನಾನು ಅರ್ಧ ಓದಿ ಬಿಟ್ಟಿದ್ದ ವಿವೇಕ ಶಾನಭಾಗರ 'ಒಂದು ಬದಿ ಕಡಲು' ಕಾನೂರು ಹೆಗ್ಗಡತಿಯನ್ನ ದಾಟಿಕೊಂಡು ಮುಂದೆ ಬಂದು "ನನ್ನ ಓನರ್ ಬೇರೆ ಯಾರೋ. ಪಾಪ ಓದ್ಲಿ ಅಂತ ಇವನಿಗೆ ಕೊಟ್ರೆ ಅರ್ಧ ಓದಿ ನನ್ನ ಗಾಳಿನೂ ಆಡದಿರೋ ಈ ಮೂಲೆಗೆ ಎಸೆದಿದ್ದಾನೆ. ಎರ್ಡ್ ದಿನದಲ್ಲಿ ಇವ್ನು ನೂರ್ ಪೇಜ್ ಓದಿದ್ದು ನೋಡಿದ್ರೆ ಸೋಮವಾರಕ್ಕೆ ನನ್ನ ಮುಗಿಸಿ ಮುಕ್ತಿ ಕೊಡ್ತಾನೆ ಅನ್ಕೊಂಡಿದ್ದೆ. ಆದ್ರೆ ಎರಡು ವರ್ಷದ ಮೇಲೆ ಇವತ್ತೇ ಮುಖ ತೋರುಸ್ತಿರೋದು ಇವ್ನು. ಇದಕ್ಕೆಲ್ಲಾ ಮುಖ್ಯ ಕಾರಣ ಆ ತೇಜಸ್ವಿ ಪುಸ್ತಕಗಳು. ಮೊದಲು ಅವನ್ನ ಹರಿದು ಬಿಸಾಕಿದ್ರೆ ನಮಗೆ ಉಳಿಗಾಲ. ಏನ್ ಮಕ ನೋಡ್ತಿದೀರಾ. ತದುಕ್ರೋ ಆ ಚಿದಂಬರ ರಹಸ್ಯಕ್ಕೆ" ಅನ್ನುತ್ಲೂ ಶೆಲ್ಫ್ ಮೇಲಿದ್ದ ಪುಸ್ತಕಗಳೆಲ್ಲ ಒಗ್ಗಟ್ಟಾಗಿ ಗುಂಪಾಗಿ ಜೋಡಿಸಿದ್ದ ತೇಜಸ್ವಿ ಪುಸ್ತಕಗಳ ಮೇಲೆ ದಾಳಿ ಮಾಡಿದವು. ನಾನು 'ಒಂದು ಬದಿ ಕಡಲು'ಗೆ ಸಮಾಧಾನ ಮಾಡೋದಕ್ಕೆ "ಗುರು ನಿಂದೇನು ತಪ್ಪಿಲ್ಲ. ಸಕತ್ ಎಂಗೇಜಿಂಗ್ ಆಗಿದ್ದೆ ನೀನು. ಆ ಟೈಮಲ್ಲಿ ಏನೋ ಕೆಲ್ಸ ಬಂತು. ದಯವಿಟ್ಟು ದಂಗೇನ ನಿಲ್ಸು ಇವತ್ತೇ ನಿನ್ನ ಓದ್ತೀನಿ" ಅಂತ ಕಿರುಚಿದ್ರೂ ಕೇಳದೆ ಚಿದಂಬರ ರಹಸ್ಯದ ಬುಕ್ ಮಾರ್ಕ್ ಹಿಡಿದುಕೊಂಡು ಜಗ್ಗಾಡುತ್ತಾ ಒಟ್ನಲ್ಲಿ ಕ್ರಾಂತಿ ಆಗ್ಲೇಬೇಕು ಅಂತ ಕೂಗುತ್ತಾ ದೊಂಬಿ ಜೋರು ಮಾಡಿದವು. "ನಾನೂ ತೇಜಸ್ವಿ ಬುಕ್ ಕಣ್ರೋ. ನನ್ನ ಇವ್ನು ಹತ್ತು ಪರ್ಸೆಂಟೂ ಓದಿಲ್ಲ" ಅಂತ 'ಹೊಸ ವಿಚಾರಗಳು' ಎಷ್ಟೇ ಅಂಗಲಾಚಿದರೂ ಅದಕ್ಕೂ ಸರಿಯಾಗಿ ಏಟುಗಳು ಬಿದ್ದವು. ಈ ದೊಂಬಿ ನಡೆಯುತ್ತಿರುವಾಗ ಮಂಚದ ಮೇಲೆ ಬಿದ್ದಿದ್ದ ನನ್ನ ಲ್ಯಾಪ್‌ಟಾಪ್‌ನಿಂದ ಸೌಂಡು ಬರುತ್ತಿರುವಂತೆ ಅನ್ನಿಸಿತು. ಅದನ್ನ ಬೆಳಿಗ್ಗೆಯಿಂದ ಆನೇ ಮಾಡಿರಲಿಲ್ಲ. ಆದ್ರೆ ಈ ಸಂಭಾಷಣೆ ಮೆಲ್ಲ ವಾಲ್ಯೂಮ್ ಅಲ್ಲಿ ಲ್ಯಾಪ್‌ಟಾಪ್‌ನ ಸ್ಪೀಕರಿನಿಂದ ಬರ್ತಾ ಇತ್ತು-
"ನೋಡು ಆ ಜುಜುಬಿ ಬುಕ್ಸ್‌ಗಳಿಗಿರುವಷ್ಟು ಒಗ್ಗಟ್ಟು ನಮ್ಮ ಸಿನಿಮಾಗಳಿಗಿಲ್ಲ. ನನ್ನನ್ನ ಈ ಹೊಸ ಲ್ಯಾಪ್‌ಟಾಪ್ ತಗೊಂಡಾಗ ಡೌನ್ಲೋಡ್ ಮಾಡಿದ್ದು. ಇನ್ನೂ ಈ ಲ್ಯಾಪ್‌ಟಾಪಲ್ಲಿರೋದು ವಿಂಡೋಸ್ ಮೀಡಿಯಾ ಪ್ಲೇಯರ್ರಾ ಇಲ್ಲಾ ವಿಎಲ್‌ಸಿನಾ ಅಂತಾನೇ ನನಿಗೆ ಗೊತ್ತಾಗಿಲ್ಲ. ಇದಕ್ಕೆಲ್ಲ ಕೊನೆಗಾಣಿಸಲೇಬೇಕು" ಕುರೋಸಾವಾನ 'High and Low’ ದನಿ.
"ಇವ್ರೇ ನಾನೂ ಟೊರೆಂಟಲ್ಲಿ ನಿಮ್ಮ ಜೊತೇನೇ ಬಂದಿದ್ದು. ಜನ್ರ ಹತ್ರ 'ಡಾ ಸ್ಟ್ರೇಂಜ್‌ಲವ್' ಅದ್ಬುತ ಸಿನಿಮಾ ಅಂತ ಬಿಲ್ಡಪ್ ಕೊಡೋದೇ ಆಯ್ತು ಇವಂದು. ನಾನೂ ಸ್ಟ್ಯಾನ್ಲಿ ಕ್ಯೂಬ್ರಿಕ್ಕಿಗೇ ಹುಟ್ಟಿರೋದು. ನನ್ನ ಮೂಸೂ ನೋಡ್ತಿಲ್ಲ" 'Barry Lyndon’ ವಾಯ್ಸು.
"ವಾರಕ್ಕೊಂದ್ಸಲ ಆ ದರಿದ್ರ 'ಬಿಗ್ ಲೆಬೋಸ್ಕಿ' ನೋಡ್ತಾ ಇರ್ತಾನೆ. ಮೊದಲು ಅದಿರೋ ಫೋಲ್ಡರನ್ನೇ ಕರಪ್ಟ್ ಮಾಡ್ಬಿಡಣ ಏನಂತೀರಾ?" ಸ್ಕಾರ್ಸೇಸಿಯ 'ಕಿಂಗ್ ಆಫ್ ಕಾಮೆಡಿ' ರಾಬರ್ಟ್ ಡಿ ನಿರೋ ವಾಯ್ಸಲ್ಲೇ ಇದನ್ನ ಹೇಳ್ತಾ ಇತ್ತು. ಹಿಂಗೇ ಬಿಟ್ರೇ ಲ್ಯಾಪ್‌ಟಾಪ್‌ನ ದೆಂಗಿ ದೇವ್ರು ಮಾಡ್ಬಿಡ್ತಾವೆ ಅಂತ ನಾನು ರಪ್ ಅಂತ ಸ್ವಿಚ್ ಆನ್ ಮಾಡಿ ಡಿಸ್ಕ್ ಫಾರ್ಮ್ಯಾಟ್ ಮಾಡೋ ತರ ಡವ್ ಮಾಡಿದಮೇಲೆ ಸ್ಪೀಕರ್ ಸೈಲೆಂಟ್ ಆಯ್ತು. ಶೆಲ್ಫ್ ಮೇಲೆ ಬುಕ್‌ಗಳ ಜಗಳ ಮುಂದುವರೀತಾನೇ ಇತ್ತಲ್ಲ ಮಾಡ್ತೀನಿ ತಡೀರಿ ನಿಮಿಗೆ ಅಂತ ಹಾಲ್‌ನಲ್ಲಿ ಧಾರವಾಹಿ ನೋಡ್ತಿದ್ದ ನಮ್ಮಮ್ಮನನ್ನ ಕೂಗಿ "ನನ್ನ ಬುಕ್‌ಗಳನ್ನೆಲ್ಲ ತೂಕಕ್ಕೆ ಹಾಕಿಬಿಡು" ಅಂದೆ. ಆ ಕಡೆಯಿಂದ ಉತ್ತರ ಬರುವುದರೊಳಗೆ ಶೆಲ್ಫ್ ಮೊದಲಿನ ತರ ಆಗಿತ್ತು. ಇವಾಗ ನಾನು ಮತ್ತೆ ಬಿಗ್ ಲೆಬೋಸ್ಕಿ ನೋಡ್ತಾ ಇರೋದು ಕಂಡು ಪುಸ್ತಕಗಳೆಲ್ಲಾ ಗೋಡೆ ಕಡೆ ಮುಖ ಮಾಡಿ ನಿಂತಿದಾವೆ. ನಿತಿನನ ಶಾರ್ಟ್ ಫಿಲ್ಮ್ ಸ್ಕ್ರಿಪ್ಟ್ ಲ್ಯಾಪ್‌ಟಾಪಲ್ಲಿ ಗೊರಾಗೊರಾ ಅಂತಿದೆ.