ನನಿಗೆ ಒಂದು ಒಂಬತ್ತು ವರ್ಷ ಅವಾಗ. ಜೋಗಿ ರಿಲೀಸಾಗಿದ್ದ ಟೈಮು. ಅವಾಗ ಅಷ್ಟು ಸಿನಿಮಾ ನೋಡೋ ಚಟ ಇರಲಿಲ್ಲ. ಆದ್ರೂ ಎಲ್ರೂ ಜೋಗಿ ಜೋಗಿ ಅಂತಿದಾರೆ ಅಂದಮೇಲೆ ಆ ವಸ್ತು ನನಿಗೂ ಬೇಕು ಅಂತ ಹಠ ಹಿಡಿದು ಕುತ್ಕೊಂಡೆ. ಒಂದು ವಾರ ಅತ್ತು, ಊಟ ಬಿಟ್ಟು, ಒದೆ ತಿನ್ನೋ ಶಾಸ್ತ್ರ ಎಲ್ಲ ಮುಗಿದಮೇಲೆ ಹಾಳಾಗ್ ಹೋಗ್ಲಿ ತೋರುಸ್ಕೊಂಡು ಬಾ ಅಂತ ನಮ್ಮ ಒಬ್ಬಳು ಚಿಕ್ಕಮ್ಮನ ಜೊತೆಗೆ ಕಳಿಸಿದ್ರು. ದಾವಣಗೆರೆಯ ಪುಷ್ಪಾಂಜಲಿ ಟಾಕೀಸ್ ಮುಂದೆ ಹೋಗಿ ನೋಡಿದ್ರೆ ಜನ ಜಾತ್ರೆ. ಈ ರಶ್ಶಲ್ಲಿ ಟಿಕೆಟ್ ಸಿಗಲ್ಲ ಅಂತ ಗೊತ್ತಾಯ್ತು. ಪಕ್ಕದ ಗೀತಾಂಜಲಿಯಲ್ಲಿ ಗೌರಮ್ಮ ಐತೆ ಅದಕ್ಕೆ ಟಿಕೆಟ್ ಸಿಗತ್ತೆ ಅಂತ ನಮ್ಮನ್ನ ಬಿಟ್ಟು ಹೋಗಲು ಬಂದಿದ್ದ ನಮ್ಮ ಮಾಮ ಹೇಳಿದ. ನನಿಗೇನೂ ಜೋಗಿನೇ ನೋಡಬೇಕು ಅಂತ ಐಡಿಯಾಲಾಜಿಕಲ್ ಕಮಿಟ್ಮೆಂಟ್ ಇರ್ಲಿಲ್ಲ. ಸರಿ ಆಯ್ತು ಅಂತ ಗೌರಮ್ಮಕ್ಕೆ ಟಿಕೆಟ್ ತಗೊಂಡು ಹೋದ್ವಿ. ಅದು ಯಾವ ಲೆವೆಲ್ಲಿಗೆ ತಲೇಲಿ ಕುತ್ಕೊಂಡ್ಬಿಡ್ತು ಅಂದ್ರೆ ನೆಕ್ಸ್ಟು ಚೆಲುವಿನ ಚಿತ್ತಾರ ನೋಡೋ ತನಕ ನನಿಗೆ ಸಿನಿಮಾನ ಅಳೆಯೋ ಮೆಟ್ರಿಕ್ಕೇ ಗೌರಮ್ಮ ಆಗಿತ್ತು. ಸಿನಿಮಾದಲ್ಲಿ ಎರ್ಡೇ ಟೈಪು- ಗೌರಮ್ಮಕ್ಕಿಂತ ಚೆನ್ನಾಗಿರೋದು, ಗೌರಮ್ಮದಷ್ಟೇನು ಚೆನ್ನಾಗಿಲ್ದಿರೋದು.
ಮೂರ್ನಾಕು ತಿಂಗಳ ಮುಂಚೆ ನಮ್ಮಪ್ಪ ತೀರಿಕೊಂಡು ನಾನು ಓದೋಕೆ ಅಂತ ನಮ್ಮಜ್ಜಿ ಊರಿಗೆ ಬಂದಿದ್ದೆ. ನಮ್ಮಜ್ಜಿ ಮನೆಗೆ ಕ್ರಿಕೆಟ್ ನೋಡೋಕೆ ಬರ್ತಿದ್ದ ನಮ್ಮ ಮಾವನ ಗ್ಯಾಂಗಿನಲ್ಲಿ ಒಬ್ಬ ಅದೇ ದಿನ ರಿಲೀಸಾಗಿದ್ದ ಆಟೋ ಶಂಕರ್ ನೋಡಿಕೊಂಡು ಬಂದಿದ್ದ. ಅವನೂ ಉಪೇಂದ್ರನ ಫ್ಯಾನೇ. ಆಟೋ ಶಂಕರ್ ಚೆನಾಗೈತೆ ಆದ್ರೆ ಗೌರಮ್ಮದಷ್ಟು ಚೆನಾಗಿಲ್ಲ ಅಂತ ಹೇಳ್ದ. ಅವನೇ ರಾಮಣ್ಣ.
ಹಿಂಗೆ ಪರಿಚಯವಾದ ರಾಮಣ್ಣ AKA ರಮೇಶ್ ನಂಗಿಂತ ಎಂಟೊಂಬತ್ತು ವರ್ಷ ದೊಡ್ಡವನು. ಅವಾಗ ಡಿಗ್ರಿ ಫಸ್ಟ್ ಇಯರ್ರೋ ಸೆಕೆಂಡ್ ಇಯರ್ರೋ ಓದ್ತಿದ್ದ ಅನ್ಸತ್ತೆ. ಕಾಲೇಜಿಗೆ ದಿನಾ ದಾವಣಗೆರೆಗೆ ಹೋಗ್ತಿದ್ದ ಇವನು ಹಳ್ಳಿಯಲ್ಲೇ ಬಿದ್ದಿರ್ತಿದ್ದ ನಮಗೆಲ್ಲ ದಿನಾ ಏನಾದ್ರೂ ಒಂದು ಹೊಸ ಹೊಸ ವಿಷಯಗಳನ್ನ ತಗೊಂಡು ಬರ್ತಿದ್ದ. ದಿನಾ ಬಸ್ಸಿಗೆ ಒಂದೇ ನೋಟ್‌ಬುಕ್ ಹಿಡಿದುಕೊಂಡು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಇಸ್ತ್ರೀ ಮಾಡಿದ ಬಟ್ಟೆ ಹಾಕಿಕೊಂಡು ಹೋಗ್ತಿದ್ದ ರಾಮಣ್ಣ ಆ ಕೊಂಪೆಯಲ್ಲಿ ಒಂದು ಸ್ಪೆಷಲ್ ಐಟಂ ತರ ಕಾಣ್ತಿದ್ದ. ಪ್ರತಿ ವಾರ ರಿಲೀಸಾಗ್ತಿದ್ದ ಸಿನಿಮಾಗಳನ್ನೆಲ್ಲ ಒಂದೂ ಬಿಡದಂಗೆ ನೋಡಿಕೊಂಡು ಬಂದು ಗೌರಮ್ಮಕ್ಕಿಂತ ಚೆನಾಗಿದ್ಯ ಇಲ್ವಾ ಅಂತ ಹೇಳ್ತಿದ್ದ. ಮುಂಗಾರುಮಳೆಯನ್ನ ಮೊದಲ ದಿನವೇ ನೋಡಿಕೊಂಡು ಬಂದು ಮೊಲದ ಸೀನ್ ಎಕ್ಸ್‌ಪ್ಲೇನ್ ಮಾಡ್ತಾ ಅತ್ತೂ ಅತ್ತೂ ಸಾಕಾಯ್ತು ಅಂತ ನನಿಗೆ ಅದರ ಬಗ್ಗೆ ಮೊದಲು ಸುದ್ದಿ ಮುಟ್ಟಿಸಿದವನು ಇವನೇ. ಆ ಟೈಮಲ್ಲಂತೂ ನಾನು ದೊಡ್ದವನಾದಮೇಲೆ ರಾಮಣ್ಣನ ತರ ಆಗಬೇಕು ಅಂತ್ ಫಿಕ್ಸ್ ಆಗ್ಬಿಟ್ಟಿದ್ದೆ.
ರಾಮಣ್ಣ ಅಷ್ಟು ಬುದ್ಧಿವಂತನಾಗಿ ನನಗೆ ಕಾಣ್ಸೋದಕ್ಕೆ ಆ ಊರೂ ಕಾರಣ ಇರಬಹುದು. ಯಾಕಂದ್ರೆ ಕ್ರಿಕೆಟ್ ನೋಡ್ತಿದ್ದಾಗ ಮಳೆಯಿಂದಾಗಿ ಪಂದ್ಯ ನಿಂತಿದೆ ಇನ್ನ ಮುವತ್ತು ನಿಮಿಷದಲ್ಲಿ ಪ್ರಾರಂಭವಾಗತ್ತೆ ಅಂತೆ ಕೆಳಗಡೆ ಬರ್ತಾ ಇರೋ ಇಂಗ್ಲಿಷ್ ಟೆಕ್ಸ್ಟನ್ನ ಓದಿ ಅದರ ಅರ್ಥವನ್ನ ಹೇಳಬಲ್ಲವನು ಅಲ್ಲಿದ್ದಿದ್ದು ಇವನೊಬ್ಬನೇ. ಜೊತೆಗೆ ಯಾವ್ದೇ ಕೆಲ್ಸಕ್ಕೂ ಬರೀ ಹಳೇಕಾಲದ ಮೆಥಡ್ಡನ್ನೇ ಹಿಡಿಯುತ್ತಿದ್ದ ಆ ಜನರ ನಡುವೆ ಹೊಸ ಕಾಲದ ಹೊಸ ಹೊಸ ಎಕ್ಸ್‌ಪೆರಿಮೆಂಟುಗಳನ್ನ ಇವನು ಮಾಡ್ತಿದ್ದ. ಒಂದ್ಸಲ ಗಣೇಶನ್ನ ಕೂರ್ಸಿದ್ದಾಗ ಎಲ್ರೂ ಮಾಮೂಲಿ ತರ ಬಾಳೇ ಕಂದು ಮಾವಿನಸೊಪ್ಪು ಒಂದೆರಡು ಡಿಮ್ ಅಂಡ್ ಡಿಪ್ ಲೈಟ್ ಸರ ತಂದು ನಾಳೆ ಟೇಬಲ್ ಮೇಲಿಟ್ಬಿಟ್ರೆ ಮುಗೀತು ಅನ್ಕೊಂಡಿದ್ರು. ಇವನು ಹುಡುಗರೆನ್ನೆಲ್ಲ ಗುಡ್ಡೆ ಹಾಕಿಕೊಂಡು ಅಲ್ಲಿ ತರಿಸಿದ್ದ ಬಣ್ಣದ ಪೇಪರ್‌ಗಳು ತೆಂಗಿನ ಗರಿಯ ಕಡ್ಡಿಗಳೆನ್ನಲ್ಲ ಕಟ್ ಮಾಡ್ತಾ ಕೂತ್ಕೊಂಡ. ರಾತ್ರಿ ಎರಡು ಮೂರು ಗಂಟೆಯಾದ್ರೂ ಮನೆಗೆ ಹೋಗಲು ಬಿಡದ ಇವನ ಮೇಲೆ ಎಲ್ರೂ ಸಿಟ್ಟು ಮಾಡಿಕೊಂಡಿದ್ರು. ಆದ್ರೆ ಕಟ್ ಮಾಡಿದ್ದ ಪೇಪರ್ರು ಕಡ್ಡಿಗಳನ್ನ ಅಂಟಿಸಿ ರಾಮಣ್ಣ ಅದಕ್ಕೊಂದು ಮಂಟಪದ ರೂಪ ಕೊಟ್ಟಮೇಲೆ ಎಲ್ರಿಗೂ ಸೈಕು. ಆ ಮಂಟಪದಲ್ಲಿ ಎಡಕ್ಕೆ ಬಲಕ್ಕೆ ಮತ್ತೆ ಮೇಲೊಂದು ತೂತು ಬಿಟ್ಟಿದ್ದ. ಯಾಕೆ ಅಂತ ನಾನು ಕೇಳಿದಾಗ ಬೆಳಿಗ್ಗೆ ತೋರಿಸ್ತೀನಿ ಇರು ಅಂದ. ಮಾರನೇ ದಿನ ಗಣಪತಿ ತರುವ ವೇಳೆಗೆ ಆ ಮೂರೂ ತೂತುಗಳಿಂದ ಒಂದೊಂದು ಬಣ್ಣದ ಲೈಟ್ ಬಿಟ್ಟು ಹೆಂಗಿದೆ ಅಂದ. ನಾನಂತೂ ಅಷ್ಟು ಪ್ಯಾಶನ್ನಿಂದ ಮಾಡಿರೋ ಗಣಪತಿ ಮಂಟಪಾನ ಮತ್ತೆಲ್ಲೂ ನೋಡಿಲ್ಲ.
ಪೇಪರ್ ಕಟ್ಟಿಂಗ್ ವಿಷಯ ಬಂದಿದ್ರಿಂದ ಇನ್ನೊಂದು ನೆನಪು ತಲೆಗೆ ಬಂತು. ನಾನು ಇವಾಗ ರಾಮಣ್ಣನ ಬಗ್ಗೆ ಹೇಳ್ತಾ ಇರೋ ತರಾನೆ ರಾಮಣ್ಣ ನಮ್ಮ ಎರಡನೇ ಮಾವನ ಬಗ್ಗೆ ಅಭಿಮಾನದಿಂದ ಅವಾಗಾವಾಗ ಹೇಳ್ತಿದ್ದ. ಅವನಿಗೆ ಚೆಸ್ ಆಡೋದಕ್ಕೆ ಕಲಿಸಿದ್ದೂ ಮಂಜು ಮಾಮನೇ ಅಂತೆ. ನಮ್ಮ ಮನೆಯಲ್ಲಿ ಚೆಸ್ ಪಾನ್‌ಗಳು ಇದ್ವು. ಆದ್ರೆ ಬೋರ್ಡ್ ಏನಾಗಿತ್ತೋ ಏನ್ ಕತೇನೋ ಇರಲಿಲ್ಲ. ರಾಮಣ್ಣ ನನ್ನ ಒಂದು ಉದ್ದನೇ ನೋಟ್‌ಬುಕ್ ಮೇಲೆ ಡಿಸ್ ಡಿಸೈನಾಗಿ ಹೆಸರು ಬರೆದು ಕೊಟ್ಟಿದ್ದ. ಅದು ತುಂಬಿದೆಯಾ ಅಂತ ಕೇಳ್ದ. ಅದು ತುಂಬಿ ವರ್ಷದ ಮೇಲಾಗಿತ್ತು. ತಂದುಕೊಟ್ಟೆ. ನಡುವೆ ಇರೋ ಹಾಳೇನೆಲ್ಲ ಕಿತ್ತು ಬರೀ ರಟ್ಟು ಮಾತ್ರ ಉಳಿಸಿಕೊಂಡ. ಸ್ಕೇಲ್‌ನಲ್ಲಿ ಆ ರಟ್ಟಿನ ಅಳತೆ ತಗೊಂಡು ಏನೋ ಲೆಕ್ಕಾಚಾರ ಹಾಕಿ ಬಾಕ್ಸ್‌ಗಳನ್ನ ಬರೆದು ಅದಕ್ಕೆ ಕಪ್ಪುಬಿಳುಪಿನ ತರ ಕಾಣುವಂತೆ ಬಣ್ಣ ತುಂಬಿದ. ಸ್ವಲ್ಪ ಹೊತ್ತಿನಲ್ಲೇ ಅರವತ್ನಾಲ್ಕು ಮನೆಗಳ ಒಂದು DIY ಚೆಸ್ ಬೋರ್ಡ್ ರೆಡಿಯಾಯ್ತು. ಆ ಚೆಸ್ ಬೋರ್ಡಿನಲ್ಲಿ ಅವನ ಜೊತೆ ಎಷ್ಟು ಮ್ಯಾಚ್ ಆಡಿದ್ದೀನೋ ಲೆಕ್ಕ ಇಲ್ಲ. ಅವನೇ ಹೇಳಿಕೊಟ್ಟ ಟ್ರಿಕ್ಸ್‌ಗಳನ್ನ ಉಪಯೋಗಿಸಿಕೊಂಡು ಅವನನ್ನ ಸೋಲಿಸಿದಾಗ ರಾಮಣ್ಣ ಹೆಮ್ಮೆ ಪಡ್ತಿದ್ದ.
ಆದ್ರೆ ನಾನು ಏಳನೇ ಕ್ಲಾಸ್ ಮುಗಿಸಿ ಮತ್ತೆ ನಮ್ಮೂರಿಗೆ ಬಂದಮೇಲೆ ರಾಮಣ್ಣನ ಸಂಪರ್ಕ ಕಟ್ಟಾಗಿ ಹೋಯ್ತು. ಅವಾಗಾವಾಗ ಅಜ್ಜಿ ಊರಿಗೆ ಹೋದಾಗ ಸಿಕ್ಕು ಮಾತಾಡಿಸ್ತಿದ್ದ ಅಷ್ಟೇ. ಆದ್ರೆ ಕಾಲ ಮುಂದುವರೆದಂತೆ ರಾಮಣ್ಣ ಅಷ್ಟು ಎನಿಗ್ಯ್ಮ್ಯಾಟಿಕ್ ಅನ್ಸಿದ್ದು ಯಾಕೋ ಬರೀ ನಾಸ್ಟೆಲ್ಜಿಯದ ಮಹಿಮೆ ಇರಬಹುದು ಅನ್ಸೋಕೆ ಶುರುವಾಗಿತ್ತು. ಯಾಕಂದ್ರೆ ಇತ್ತೀಚೆಗೆ ಮಾತಾಡಿಸುವಾಗ ಮುಂಚಿನ ತರ ಯಾವ್ದೇ ಮ್ಯಾಜಿಕಲ್ ಅಂಶ ಅವನಲ್ಲಿ ಕಾಣ್ತಾ ಇರಲಿಲ್ಲ. ಫೇಸ್ಬುಕ್ಕಲ್ಲಿ "ಭಕ್ತಿಯಿಂದ ಶೇರ್ ಮಾಡಿ ಒಳ್ಳೇದಾಗತ್ತೆ" ಅನ್ನೋ ಕ್ಯಾಪ್ಷನ್ ಇರೋ ಏಳು ಹೆಡೆಯ ನಾಗರ ಹಾವಿನ ಫೋಟೋಶಾಪ್ಡ್ ಇಮೇಜ್ ಶೇರ್ ಮಾಡ್ತಿದ್ದ.
ನಾನು ಸಿನಿಮಾ ಗಿನಿಮಾ ಅನ್ಕೊಂಡು ಓಡಾಡ್ತಿರೋ ವಿಷಯಾನೆಲ್ಲ ಅವನತ್ರ ಹಂಚ್ಕೊಂಡಿದ್ರೆ ಖುಷಿ ಪಡ್ತಿದ್ದ ಅನ್ಸತ್ತೆ. ಆದ್ರೆ ಅದಕ್ಕೆ ಟೈಮ್ ಬರ್ಲೇ ಇಲ್ಲ. ಹೋದ ವರ್ಷ ಉಚ್ಚಂಗಿದುರ್ಗದ ಹತ್ರ ಬೈಕ್‌ನಲ್ಲಿ ಬಿದ್ದು ತೀರಿಕೊಂಡ ಅಂತ ಸುದ್ದಿ ಬಂತು. ನಾಲ್ಕೈದು ವರ್ಷದ ಇಬ್ಬರು ಮಕ್ಕಳನ್ನ ಬಿಟ್ಟು ಹೋಗಿದ್ದಾನೆ. ಆ ಊರಲ್ಲೇನೂ ಅಂತಹ ಕ್ರಾಂತಿಕಾರಿ ಬದಲಾವಣೆಗಳು ಆಗಿಲ್ಲ. ಅವನ ಮಕ್ಕಳಿಗೆ ಚೆಸ್ ಬೋರ್ಡ್ ಮಾಡಿಕೊಡೋ ಅಂತವ್ರು ಯಾರಾದ್ರೂ ಆ ಊರಲ್ಲಿದ್ದಾರ? ಗೊತ್ತಿಲ್ಲ.
No comments:
Post a Comment