ಸಿನಿಮಾ ನೋಡೋ ಹುಚ್ಚು ಇರೋರೆಲ್ಲ ಅರ್ಜೆಂಟೀನಾದ "ವೈಲ್ಡ್ ಟೇಲ್ಸ್" ಸಿನಿಮಾನ ನೋಡೇ ನೋಡಿರ್ತಾರೆ. ನಾನೂ ಅದೇ ತರ ಈ ಸಿನಿಮಾ ನೋಡಿ ಡೈರೆಕ್ಟರ್ 'ಡೇಮಿಯನ್ ಝಿಫ್ರಾನ್' ಮೇಲೆ ಫುಲ್ ಲವ್ವಾಗಿ ಇವ್ನು ಏನೇನ್ ಮಾಡಿದಾನೆ ಎಲ್ಲಾ ನೋಡಬೇಕು ಅಂತ ಹೊರಟೆ. ಅವನ ಹಿಂದಿನ ಎರಡು ಸಿನಿಮಾ ಏನೋ ಸಿಕ್ವು. ಮಜಾ ಇದ್ವು ಅದು ಬೇರೆ. ಆದ್ರೆ ಎಲ್ಲೇ ಇವ್ನ್ ಬಗ್ಗೆ ಓದಿದ್ರೂ ಇವನ ಮೊದಲ ದಿನಗಳಲ್ಲಿ ಮಾಡಿದ್ದ ಟಿವಿ ಸೀರೀಸ್ "ಲಾಸ್ ಸಿಮ್ಯುಲಡೋರಸ್" ಬಗ್ಗೇನೆ ಮಾತು. 'ಮೋಸ್ಟ್ ಪಾಪುಲರ್ ಶೋ ಇನ್ ಅರ್ಜೆಂಟೀನಾ', 'ಬೆಸ್ಟ್ ವರ್ಕ್ ಆಫ್ ಹಿಮ್' 'ಅಮೇಝಿಂಗ್ ಶೋ' ಇತ್ಯಾದಿ. ರೆಡಿಟ್‌ನಲ್ಲಿ ಫ್ಯಾನ್ಸ್ ಡಿಸ್ಕಷನ್‌ಗಳು ಬೇರೆ. ಇದ್ಕಿಂತ ಟೆಂಪ್ಟೇಷನ್ ಬೇಕಾ? ಆದ್ರೆ ಸ್ಪ್ಯಾನಿಷ್ ಭಾಷೆಯ ಈ ಶೋಗೆ ಎಲ್ಲಿ ಹುಡುಕಿದ್ರೂ ಸಬ್‌ಟೈಟಲ್ ಸಿಗ್ತಿಲ್ಲ ನನ್ಮಗಂದು.
ಹಿಂಗೇ ಎರಡ್ ವರ್ಷ ಪಾಸಾಯ್ತು. ನಡುನಡುವೆ ಇದನ್ನ ಹುಡುಕೋದು ಇಂಗ್ಲಿಷ್ ಸಬ್‌ಟೈಟಲ್ ಸಿಗದೇ ನಿರಾಸೆ ಆಗೋದು ಆಗ್ತಾನೆ ಇತ್ತು. ಒಂದಿನ ಹಿಂಗೇ ಯೂಟೂಬಲ್ಲಿ ಇದರ ಎಲ್ಲಾ ಎಪಿಸೋಡುಗಳನ್ನ ಯಾರೋ ಒಬ್ರು ಅಪ್ಲೋಡ್ ಮಾಡಿರೋದು ಕಾಣಿಸ್ತು. ನೋಡಿದ್ರೆ ಎಲ್ಲಾದಕ್ಕೂ ಇಂಗ್ಲಿಷ್ ಸಬ್‌ಟೈಟಲ್ ಇದಾವೆ. ವಾ.. ಅವತ್ತು ಆಗಿದ್ದ ಖುಷಿ ಹಂಗಿಂಗಲ್ಲ. ಇದೇ ಖುಷಿ ಮ್ಯಾಟ್ರು ಆದ್ರೆ ಇದನ್ನ ಅಪ್ಲೋಡ್ ಮಾಡಿದ್ದರ ಹಿಂದಿನ ಕತೆ ಗೊತ್ತಾದಮೇಲಂತೂ ಹಾರ್ಟಿಗೇ ಕೈ ಹಾಕ್ದಂಗಾಯ್ತು.
ಏನಂದ್ರೆ ಇದನ್ನ ಅಪ್ಲೋಡ್ ಮಾಡಿದ್ದ ಹುಡುಗಿ ಈ ಶೋನ ಹುಚ್ಚು ಫ್ಯಾನ್. ಇದನ್ನ ಸ್ಪ್ಯಾನಿಷ್ ಭಾಷೆ ಬಾರದ ಬ್ರೆಜಿಲ್‌ನ ತನ್ನ ಬಾಯ್‌ಫ್ರೆಂಡ್‌ಗೆ ತೋರಿಸಲೇಬೇಕು ಅಂತ ಎಲ್ಲಾ ಇಪ್ಪತ್ನಾಕು ಎಪಿಸೋಡುಗಳಿಗೆ ಇಂಗ್ಲಿಷ್ ಸಬ್‌ಟೈಟಲ್ ಬರೆದು ಯೂಟೂಬಿಗೆ ಹಾಕಿದ್ದಾಳೆ. ನಾನು ಗಬಗಬ ಒಂದೇ ಗುಕ್ಕಿಗೆ ಈ ಶೋ ನೋಡಿ ಮುಗಿಸಿದಮೇಲೆ ಈ ಶೋ ಮೇಲೂ ಸಬ್‌ಟೈಟಲ್ ಬರೆದ ಆ ಹುಡುಗಿ ಮೇಲೂ ಒಟ್ಟಿಗೆ ಲವ್ ಆಯ್ತು. ಅವಳಿಗೆ ಬಾಯ್‌ಫ್ರೆಂಡ್ ಇರಲಿಲ್ಲ ಅಂದಿದ್ರೆ ಹೆಂಗಾದ್ರು ಮಾಡಿ ಅರ್ಜೆಂಟೀನಾ ತನಕ ಹೋಗಿ ಹೆಣ್ಣು ಕೇಳಬಹುದಿತ್ತು. I'm pretty sure I appreciate this show more than him :(
ಶೋ ಅಂತೂ ಸಕತ್ ಮಜವಾಗಿದೆ. ನಾಕು ಜನರ ತಂಡ. ಇವರ ಕೆಲಸ ಜನರ ಸಮಸ್ಯೆಗಳನ್ನ ಪರಿಹಾರ ಮಾಡೋದು. ಲಿಟರಲಿ ಎನಿ ಪ್ರಾಬ್ಲಂ. ಸಾಲ ಕೊಟ್ಟೋನು ಇನ್ನೆರಡ್ ದಿನದಲ್ಲಿ ತೀರಿಸಲಿಲ್ಲ ಅಂದ್ರೆ ಹೆಂಡತಿ ಮಕ್ಕಳನ್ನ ಸಾಯಿಸ್ತೀನಿ ಅಂತ ಬೆದರಿಕೆ ಹಾಕಿದ್ದರೆ ಇವರ ಸಹಾಯ ಬೇಕು.
ಗಂಡನಿಗೆ ಬೇರೊಬ್ಬಳ ಮೇಲೆ ಪ್ರೀತಿ ಆಗಿಬಿಟ್ಟಿದೆ. ಆದರೆ ಹೆಂಡತಿಗೆ ಕೈ ಕೊಟ್ಟು ಹಾರ್ಟ್ ಬ್ರೇಕ್ ಮಾಡೋಕೆ ಇಷ್ಟ ಇಲ್ಲ. ಅವಳಾಗಿ ಅವಳೇ ತನ್ನನ್ನ ಬಿಡುವಂತೆ ಮಾಡಬೇಕು. ಇದಕ್ಕೂ ಇವರ ಸಹಾಯವೇ ಬೇಕು.
ಒಬ್ಬ ತರಕಾರಿ-ಹಣ್ಣಿನ ವ್ಯಾಪಾರ ಮಾಡ್ತಿರೋ ಮುದುಕನ ಅಂಗಡಿ ಮುಂದೇನೆ ಇವಾಗ ಸೂಪರ್ ಮಾರ್ಕೆಟ್ ಕಟ್ಟೋಕೆ ತಯಾರಿ ನಡೆಸ್ತಾ ಇದಾರೆ. ಅದಾಗಿಬಿಟ್ಟರೆ ಮುದುಕನ ಹೊಟ್ಟೆ ಪಾಡಿಗೆ ಕಲ್ಲು ಬೀಳತ್ತೆ. ಇದನ್ನಂತೂ ಇವರು ಮಾತ್ರ ಬಗೆಹರಿಸಬಲ್ಲರು.
ಇಷ್ಟೆಲ್ಲ ಯಾಕ್ರಿ. ಅರ್ಜೆಂಟೀನಾ ಪ್ರೆಸಿಡೆಂಟಿಗೆ ಹೆಂಡತಿ ಜೊತೆ ಮಲಗಿದಾಗ ಸಾಮಾನು ಏಳಲ್ಲ. ಎರೆಕ್ಟೈಲ್ ಡಿಸ್‍ಫಂಕ್ಷನ್. ಇದರಿಂದಾಗೋ ಹತಾಷೆ ಅವನ ಆಡಳಿತದ ಮೇಲೂ ಪರಿಣಾಮ ಬೀರ‌್ತಿದೆ. ಇದನ್ನ ಕೂಡಾ ಇವರೇ ಬಗೆಹರಿಸೋದು..
ಮಜಾ ಇರೋದು ಇವನ್ನೆಲ್ಲ ಇವರು ಹೇಗೆ ಬಗೆಹರಿಸ್ತಾರೆ ಅನ್ನೋದ್ರಲ್ಲಿ. ಇವರು ರೌಡಿಗಳಲ್ಲ. ಯಾರನ್ನೂ ಹೆದರಿಸೋದಿಲ್ಲ. ಇವರದ್ದೇನಿದ್ರೂ ಸೈಕಲಾಜಿಕಲ್ ಆಟ. ನಾಕು ಜನರ ತಂಡ ಅಂತ ಹೇಳಿದ್ನಲ್ಲ ಅದರಲ್ಲಿ ಒಬ್ಬೊಬ್ಬರದೂ ಒಂದು ಕೆಲಸ. ಒಬ್ಬಂದು ಇನ್ವೆಸ್ಟಿಗೇಷನ್. ಇನ್ನೊಬ್ಬಂದು ಆಪರೇಶನ್‌ಗೆ ಬೇಕಾದ ಓಡಾಟ, ಟೆಕ್ನಾಲಜಿ, ಕಾಸ್ಟ್ಯೂಂ ಇತ್ಯಾದಿಗಳನ್ನ ಹೊಂದಿಸೋದು. ಮತ್ತೊಬ್ಬನದು ಪಾತ್ರದಾರಿ ಕೆಲಸ. ಉಳಿದವನದ್ದು ಪ್ಲಾನಿಂಗ್. ಇವರೆಲ್ಲ ಒಟ್ಟಾಗಿ 'ಸಿಚುವೇಷನ್‌ಗಳನ್ನ' ಸೃಷ್ಟಿಸಿ ಎದುರಾಳಿಗೆ ಗೊತ್ತೇ ಆಗ್ದಿರೋ ತರ ತಮಗೆ ಬೇಕಾದ ಕೆಲಸ ಮಾಡ್ಕೊತಾರೆ. ಅದಕ್ಕೇ ಶೋ ಹೆಸರು Los Simuladores. (The Simulators). ಅದಕ್ಕಿಂತ ಬೆಟರ್ ಟ್ರಾನ್ಸ್ಲೇಷನ್ ಅಂದ್ರೆ Pretenders. ಹೋಗ್ಲಿ ಕನ್ನಡದಲ್ಲಿ ಹೇಳಬೇಕಂದ್ರೆ 'ನಾಟಕ ಮಾಡೋರು'.
ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಏನಂದ್ರೆ ಇದನ್ನ ಬರೆದು ನಿರ್ದೇಶಿಸಿದಾಗ ಡೇಮಿಯನ್ ಝಿಫ್ರಾನ್‌ಗೆ ಬರೇ ಇಪ್ಪತ್ತೈದು ವರ್ಷ ವಯಸ್ಸು. ಪ್ರತಿ ಎಪಿಸೋಡಲ್ಲೂ ಏನ್ ಬೇಕಾದ್ರೂ ಸಮಸ್ಯೆ ಇರಬಹುದಾದ್ರಿಂದ ಒಂದೊಂದು ಎಪಿಸೋಡೂ ಬೇರೇನೆ ಜಾನರ್. ಒಂದು ಕ್ರೈಮ್ ಥ್ರಿಲ್ಲರ್ ಆದ್ರೆ ಇನ್ನೊಂದು ಸೈನ್ಸ್ ಫಿಕ್ಷನ್ ತರದ್ದು. ಮತ್ತೊಂದು ಸೂಪರ್ ಹೀರೋದು. ಇನ್ನೊಂದು ಸೋಷಿಯಲ್ ಸೆಟೈರ್. ಹಿಂಗೇ ಆಟ ಆಡ್ಬಿಟ್ಟಿದಾನೆ ನನ್ಮಗ. ಸಾಮಾನ್ಯವಾಗಿ ಸೀರೀಸ್‌ಗಳನ್ನ ಹಲವಾರು ಜನ ಸೇರಿ ಬರೆಯೋದ್ರಿಂದ ಒಬ್ಬಂದೇ ಅಂತ ಪರ್ಸನಲ್ ಸ್ಟ್ಯಾಂಪ್ ಇರಲ್ಲ. ಆದ್ರೆ ಇಲ್ಲಿ ಇವನೇ ಎಲ್ಲಾ ಎಪಿಸೋಡುಗಳನ್ನ ಬರೆದು ನಿರ್ದೇಶಿಸಿರೋದ್ರಿಂದ ಇಡೀ ಶೋ ಮೇಲೆ ಇವನ ಸಿಗ್ನೇಚರ್ ಸಕತ್ತಾಗ್ ಮೂಡಿದೆ. ಅವನು ಯೂಸ್ ಮಾಡೋ ಮ್ಯೂಸಿಕ್, ತನ್ನ ಇಷ್ಟದ ಸಿನಿಮಾಗಳಿಗೆ ಟ್ರಿಬ್ಯೂಟ್ ಕೊಡೋ ರೀತಿ, ತನ್ನ ಫೇವರಿಟ್ ಟಾಪಿಕ್‌ಗಳಾದ ಹಿಸ್ಟರಿ, ಸೈನ್ಸ್, ವರ್ಲ್ಡ್ ಪಾಲಿಟಿಕ್ಸ್ ಇವೆಲ್ಲವನ್ನೂ ಕತೆಯೊಳಗೆ ತರೋ ರೀತಿ ಎಲ್ಲಾದ್ರಲ್ಲೂ ಅವನ ಮಾರ್ಕ್ ಇರತ್ತೆ. ಮತ್ತೆ ಅಷ್ಟು ಚಿಕ್ಕ ವಯಸ್ಸಿಗೆ ಅದೆಲ್ಲದನ್ನೂ ಮೆಚೂರ್ಡ್ ಆಗಿ ಹ್ಯಾಂಡಲ್ ಮಾಡಿರೋದಂತೂ ಸೂಪರ್.
ಆ ಹುಡುಗಿ ಅಷ್ಟು ಕಷ್ಟ ಪಟ್ಟು ಯಾಕೆ ಇದಕ್ಕೆ ಸಬ್‌ಟೈಟಲ್ ಬರೆದ್ಲು ನಾನ್ಯಾಕೆ ಇಷ್ಟ್ ಬಿಲ್ಡಪ್ ಕೊಡ್ತಿದೀನಿ ಅಂತ ಇದನ್ನ ನೋಡಿದ್ರೆ ನಿಮಗೆ ಗೊತ್ತಾಗತ್ತೆ. ಕಾಪಿರೈಟ್ ಸಮಸ್ಯೆಯಿಂದ ಆ ಹುಡುಗಿ ಅಪ್ಲೋಡ್ ಮಾಡಿದ್ರಲ್ಲಿ ಕೆಲವು ಎಪಿಸೋಡುಗಳನ್ನ ಯೂಟೂಬ್‌ನವರು ಡಿಲಿಟ್ ಮಾಡಿದ್ರು. ಆ ವಿಡಿಯೋ ಕ್ವಾಲಿಟಿ ಕೂಡಾ ಅಷ್ಟೇನೂ ಚೆನ್ನಾಗಿಲ್ದೇ ಇದ್ದಿದ್ರಿಂದ ನಾನು ಸಜೆಸ್ಟ್ ಮಾಡಿದ ಯಾರೂ ನೋಡಿರ್ಲಿಲ್ಲ ಇದನ್ನ. ಅದಕ್ಕೇ ಇದ್ದಿದ್ರಲ್ಲಿ ಒಳ್ಳೇ ಕ್ವಾಲಿಟಿ ಹುಡುಕಿ ಅದಕ್ಕೆ ಮತ್ತೆ ಸಬ್‌ಟೈಟಲ್‌ಗಳನ್ನ ಪುನಃ ಸಿಂಕ್ ಮಾಡಿ ಒಂದ್ ಕಡೆ ಗುಡ್ಡೆ ಹಾಕಿದೀನಿ. ಪ್ಲೀಸ್ ಚೆಕಿಟ್ ಔಟ್ :)
No comments:
Post a Comment