Monday, 18 December 2023

 ಇವತ್ತು ಬೆಳಿಗ್ಗೆ ನಿತಿನ ಕಾಲ್ ಮಾಡಿದ್ದ. ವಾರದ ಹಿಂದೆ ಅವನ ಶಾರ್ಟ್ ಫಿಲ್ಮ್ ಸ್ಕ್ರಿಪ್ಟ್ ಕಳ್ಸಿದ್ದ. ಇನ್ನೆರಡು ವಾರದಲ್ಲಿ ಶೂಟ್ ಮಾಡ್ಬೇಕು ಮಗಾ, ಓದಿ ಫೀಡ್‌ಬ್ಯಾಕ್ ಕೊಡು ಅಂತ ನಾಲ್ಕನೇ ಸರ್ತಿ ನೆನಪಿಸಿದ. ಆಯ್ತು ಮಗಾ ಇವತ್ತು ತಲೆ ಮೇಲ್ ತಲೆ ಹೋಗ್ಲಿ ಓದಿ ಸಂಜೆ ಕಾಲ್ ಮಾಡ್ತೀನಿ ಅಂದು ನಾನು ಫೋನ್ ಇಡುತ್ಲೂ ನನ್ನ ರೂಮಲ್ಲಿ ಶೆಲ್ಫ್ ಮೇಲಿದ್ದ ಫ್ರಾಂಝ್ ಕಾಫ್ಕಾನ 'The Metamorphosis' ಕಿಸಿಕಿಸಿ ನಕ್ಕು "ಅವ್ನು ಓದ್ದಂಗೆ ನೀನ್ ಕೇಳ್ದಂಗೆ" ಅಂತು. ನನಿಗೆ ಮೈಯೆಲ್ಲಾ ಉರೀತು. ಈ ಕಾಪಿರೈಟ್ ಮುಗ್ದಿರೋ, ಚೀಪ್ ಪೇಪರಲ್ಲಿ ಪ್ರಿಂಟ್ ಮಾಡಿರೋ ಈ ತುಕಾಲಿ ಪುಸ್ತಕಕ್ಕೆ ದುಡ್ಡು ಕೊಟ್ಟ ತಂದ ನಂಗೇ ಉಲ್ಟಾ ಮಾತಾಡೋ ಅಷ್ಟು ಸೊಕ್ಕಾ?

"ಅಲ್ಲಾ ಗುರು ಏನೋ ಬ್ಲಾಸಮ್ ಬುಕ್ ಹೌಸಲ್ಲಿದಿಯ, ರೇಟ್ ಬೇರೆ ಕಮ್ಮಿ ಅಂತ ತಂದಿದ್ದು. ನಾನೇನ್ ನಿನ್ನ ಕಟ್ಕೊತೀನಿ ಅಂತ ಅಗ್ರೀಮೆಂಟ್ ಮಾಡ್ಕೊಂಡಿದೀನಾ? ‘Kafkaesque’ ಅನ್ನೋದು ಇವಾಗ ಪಾಪ್ ಕಲ್ಚರಲ್ಲೇ ಸೇರ್ಕೊಂಡಿದೆ. ನಿನ್ನ ಓದಿನೇ ತಿಳ್ಕೊಬೇಕು ಅಂತೇನಿಲ್ಲ. ಯಜಮಾನಂಗೆ ಎದುರು ಮಾತೋಡೋದು ಬಿಟ್ಟು ಮುಚ್ಕೊಂಡು ಮೂಲೇಲಿ ಬಿದ್ದಿರು" ಅಂತ ಗದರಿದೆ.


The Metamorphosis ಬೈಂಡ್ ಮೇಲೆ ಕೈ ಹಾಕಿ ಹಿಂದಿನಿಂದ ಇಣುಕಿದ ಬಾಬ್ ಡಿಲನ್‌ನ ‘Chronicles’ ಇನ್ನೊಂದ್ಸಲ ಬೊಗಳು ಹಲ್ಕಾ ನನ್ಮಗನೆ ಎನ್ನುವಂತೆ ಸ್ವಲ್ಪ ಹೊತ್ತು ನನ್ನ ಗುರಾಯಿಸಿತು. ಇದನ್ನ ಫ್ಲಿಪ್‌ಕಾರ್ಟಿಂದ ಆರ್ಡರ್ ಮಾಡಿ ಏಳೆಂಟು ದಿನ ಕಾದು ತರಿಸಿಕೊಂಡಿದ್ದೆ. ಒಂದೆರಡು ಪೇಜ್ ಓದಿ ಇನ್ಸ್ಟಾಗ್ರಾಮಲ್ಲಿ ಸ್ಟೋರಿ ಬೇರೆ ಪೋಸ್ಟ್ ಮಾಡಿಬಿಟ್ಟಿದ್ದೆ. ಆ ವಿಷಯಾನೆಲ್ಲ ತೆಗೆದು ಶೆಲ್ಫಲ್ಲಿರೋ ಬುಕ್ಸ್ ಮುಂದೆಲ್ಲಾ ನನ್ನ ಮಾನ ತೆಗೆದರೆ ಏನಪ್ಪಾ ಮಾಡೋದು ಅಂತ ನಂಗೆ ಅಂಜಿಕೆಯಾಯ್ತು. ಆದ್ರೆ  ‘Chronicles’ ಸ್ಪೈನಲ್ಲಿ ಇದ್ದಿದ್ದೇ ಬೇರೆ. 


"ಲೇ ಗೂಬೆ. ನಾನ್ ಇಲ್ಲಿಗೆ ಬಂದು ಮನೆ ಮಾಡಿದ್ಮೇಲೇನೆ ಆ ಕರ್ವಾಲೋನ ಎರ್ಡ್ ಸಲ ಓದಿದೀಯ. ನಿಮ್ಮ ಸಿನಿಮಾ ಆಫೀಸಲ್ಲಿ ಮತ್ತೆ 'ಅಣ್ಣನ ನೆನಪು' ಓದ್ದೆ ಅಂತ ನನ್ನ ಟ್ವಿಟ್ಟರ್ ಫ್ರೆಂಡ್ಸ್ ಟೆಕ್ಸ್ಟ್ ಮಾಡಿದ್ರು. ಅಂತದ್ರಲ್ಲಿ ನಾನೂರುಪಾಯಿ ಕೊಟ್ಟು ನನ್ನ ತರ್ಸಿ ಓದ್ದೆ ಧೂಳ್ ತಿನ್ನುಸ್ತಾ ಇದೀಯಲ್ಲ ನೀನ್ ಉದ್ಧಾರ ಆಗ್ತೀಯಾ" ಅಂತು.


ಎಲ್ಲಾ ಲಾಜಿಕಲ್ ಪಾಯಿಂಟ್ಸ್ ಮಾತಾಡಿದ್ರೆ ವಾದ ಮಾಡೋದು ಕಷ್ಟ. ಆದ್ರೂ ನಾನು ಮೀಸೆ ಮಣ್ಣಾಗಲಿಲ್ಲ ಅನ್ನೋ ತರ "ಸ್ವಾಮಿ ನಾನು ದಿನಾ ಹೊತ್ತು ಮೂಡಿದ್ರೆ ನಿಮ್ಮಪ್ಪ ಬಾಬ್ ಡಿಲನ್‌ದು ನಾಕ್ ಹಾಡ್ ಕೇಳ್ತೀನಿ. ಮೊನ್ನೆ ಸ್ಪಾಟಿಫೈ wrappedನಲ್ಲಿ ಟಾಪ್ 5 ಆರ್ಟಿಸ್ಟ್ಸ್ ಅಲ್ಲಿ ಅವ್ನೂ ಇದ್ದ. ಅಷ್ಟು ಅಭಿಮಾನ ಇಲ್ದಿದ್ರೆ ನಿನ್ನ ಯಾಕ್ ದತ್ತು ತಗೊಂತಿದ್ದೆ. ಸ್ವಲ್ಪ ಹಾಳೆ ಬಿಗಿ ಹಿಡಿದು ಮಾತಾಡು" ಅಂದೆ. ನನ್ನ ವಾದ ನನಿಗೇ ಶಾಟದ್ ತರ ಅನ್ನುಸ್ತು. ನಾನು ಏನ್ ಮಾತಾಡ್ಲಿ ಅಂತ ಯೋಚನೆ ಮಾಡುತ್ತಿರುವಷ್ಟರಲ್ಲಿ ಮತ್ತೊಂದು ವಯಸ್ಸಾದ ಕುಗ್ಗಿದ ದನಿ ಕೇಳಿತು. ಕುಂ ವೀರಭದ್ರಪ್ಪ ಅವರ "ಪಕ್ಷಿಗಳು".


"ಮುಚ್ರಲೇ. ನಿನ್ನೆ ಮೊನ್ನೆ ಬಂದು ನೀವೇ ಇಷ್ಟು ನಿಗ್ರಾಡ್ತೀರಲ್ಲ; ಈ ಸುವ್ವರ್ ನನ್ಮಗ ನನ್ನ ದಾವಣಗೆರೆ ಲೈಬ್ರರಿಯಿಂದ 2013ರಲ್ಲಿ ತಗೊಂಡ್ ಬಂದೋನು ಇನ್ನೂ ಕವರ್ ಪೇಜೂ ಓಪನ್ ಮಾಡಿಲ್ಲ. ನಿಯತ್ತಾಗಿ ವಾಪಸ್ಸಾದ್ರೂ ಕೊಟ್ಟಿದ್ರೆ ಇಷ್ಟೊತ್ಗೆ ಒಂದೈವತ್ತು ಮಂದಿಯಾದ್ರೂ ಓದ್ತಿರ್ಲಿಲ್ವ ನನ್ನ? ಒಂದ್ ಲೆಕ್ಕದಲ್ಲಿ ನಾನು ಸೆರೆಯಾಳು ಇಲ್ಲಿ. ನನ್ನ್ ಕಷ್ಟ ಯಾರಿಗೇಳನ?" ಅಂದು ಅದು ಬಂದಿದ್ದ ಮೂಲೆಗೆ ಮತ್ತೆ ಹೋಗಿ ಮಕಾಡೆ ಮಲಗಿ ಬಿಕ್ಕತೊಡಗಿತು. ಅಲ್ಲೇ ಪಕ್ಕದಲ್ಲಿದ್ದ ಒಂದೆರಡು ಹೊಸ ಪುಸ್ತಕಗಳು ಆ ಕಡೆ ಈ ಕಡೆ ತೂರಾಡ್ತಾ ಆ ಮುದಿ ಪುಸ್ತಕಕ್ಕೆ ಗಾಳಿ ಬೀಸತೊಡಗಿದವು. ಇವತ್ತು ಯಾವ ಮಗ್ಗುಲಲ್ಲಿ ಎದ್ನಪ್ಪಾ ಅಂತ ನಾನು "ಆಯ್ತು ಬಿಡ್ರೋ ಇನ್ನೇನು ಜನವರಿ ಬಂತು. ಓದ್ದಿರೋ ಪುಸ್ತಕಾನೆಲ್ಲ ಓದೋದನ್ನೇ ಹೊಸ ವರ್ಷದ ರೆಸಲ್ಯೂಷನ್ ಮಾಡ್ಕೋತೀನಿ" ಅಂದೆ. ರೆಸಲ್ಯೂಷನ್ ಅಂದಕೂಡ್ಲೇ ಶೆಲ್ಫ್ ಮೇಲಿದ್ದ ಪುಸ್ತಕಗಳೆಲ್ಲಾ ಬೆಚ್ಚಿಬಿದ್ದು "ಅಣ್ಣಾ ನೀನು ಬೇಕಾದ್ರೆ ನಮ್ಮನ್ನೆಲ್ಲಾ ಹರಿದು ಮಂಡಕ್ಕಿ ತಿನ್ನೋಕೆ ಯೂಸ್ ಮಾಡು. ಆದ್ರೆ ರೆಸಲ್ಯೂಷನ್ ಅನ್ನೋ ಪದ ಮಾತ್ರ ಎತ್ತಬೇಡ" ಅಂತ ಹಣೆ ನೆಲಕ್ಕೆ ಮುಟ್ಟುವಂತೆ ನೆಲಕ್ಕೆ ಬಿದ್ದು ಅಂಗಲಾಚತೊಡಗಿದವು. 


ನಾನು ಅರ್ಧ ಓದಿ ಬಿಟ್ಟಿದ್ದ ವಿವೇಕ ಶಾನಭಾಗರ 'ಒಂದು ಬದಿ ಕಡಲು' ಕಾನೂರು ಹೆಗ್ಗಡತಿಯನ್ನ ದಾಟಿಕೊಂಡು ಮುಂದೆ ಬಂದು "ನನ್ನ ಓನರ್ ಬೇರೆ ಯಾರೋ. ಪಾಪ ಓದ್ಲಿ ಅಂತ ಇವನಿಗೆ ಕೊಟ್ರೆ ಅರ್ಧ ಓದಿ ನನ್ನ ಗಾಳಿನೂ ಆಡದಿರೋ ಈ ಮೂಲೆಗೆ ಎಸೆದಿದ್ದಾನೆ. ಎರ್ಡ್ ದಿನದಲ್ಲಿ ಇವ್ನು ನೂರ್ ಪೇಜ್ ಓದಿದ್ದು ನೋಡಿದ್ರೆ ಸೋಮವಾರಕ್ಕೆ ನನ್ನ ಮುಗಿಸಿ ಮುಕ್ತಿ ಕೊಡ್ತಾನೆ ಅನ್ಕೊಂಡಿದ್ದೆ. ಆದ್ರೆ ಎರಡು ವರ್ಷದ ಮೇಲೆ ಇವತ್ತೇ ಮುಖ ತೋರುಸ್ತಿರೋದು ಇವ್ನು. ಇದಕ್ಕೆಲ್ಲಾ ಮುಖ್ಯ ಕಾರಣ ಆ ತೇಜಸ್ವಿ ಪುಸ್ತಕಗಳು. ಮೊದಲು ಅವನ್ನ ಹರಿದು ಬಿಸಾಕಿದ್ರೆ ನಮಗೆ ಉಳಿಗಾಲ. ಏನ್ ಮಕ ನೋಡ್ತಿದೀರಾ. ತದುಕ್ರೋ ಆ ಚಿದಂಬರ ರಹಸ್ಯಕ್ಕೆ" ಅನ್ನುತ್ಲೂ ಶೆಲ್ಫ್ ಮೇಲಿದ್ದ ಪುಸ್ತಕಗಳೆಲ್ಲ ಒಗ್ಗಟ್ಟಾಗಿ ಗುಂಪಾಗಿ ಜೋಡಿಸಿದ್ದ ತೇಜಸ್ವಿ ಪುಸ್ತಕಗಳ ಮೇಲೆ ದಾಳಿ ಮಾಡಿದವು. ನಾನು 'ಒಂದು ಬದಿ ಕಡಲು'ಗೆ ಸಮಾಧಾನ ಮಾಡೋದಕ್ಕೆ "ಗುರು ನಿಂದೇನು ತಪ್ಪಿಲ್ಲ. ಸಕತ್ ಎಂಗೇಜಿಂಗ್ ಆಗಿದ್ದೆ ನೀನು. ಆ ಟೈಮಲ್ಲಿ ಏನೋ ಕೆಲ್ಸ ಬಂತು. ದಯವಿಟ್ಟು ದಂಗೇನ ನಿಲ್ಸು ಇವತ್ತೇ ನಿನ್ನ ಓದ್ತೀನಿ" ಅಂತ ಕಿರುಚಿದ್ರೂ ಕೇಳದೆ ಚಿದಂಬರ ರಹಸ್ಯದ ಬುಕ್ ಮಾರ್ಕ್ ಹಿಡಿದುಕೊಂಡು ಜಗ್ಗಾಡುತ್ತಾ ಒಟ್ನಲ್ಲಿ ಕ್ರಾಂತಿ ಆಗ್ಲೇಬೇಕು ಅಂತ ಕೂಗುತ್ತಾ ದೊಂಬಿ ಜೋರು ಮಾಡಿದವು. "ನಾನೂ ತೇಜಸ್ವಿ ಬುಕ್ ಕಣ್ರೋ. ನನ್ನ ಇವ್ನು ಹತ್ತು ಪರ್ಸೆಂಟೂ ಓದಿಲ್ಲ" ಅಂತ 'ಹೊಸ ವಿಚಾರಗಳು' ಎಷ್ಟೇ ಅಂಗಲಾಚಿದರೂ ಅದಕ್ಕೂ ಸರಿಯಾಗಿ ಏಟುಗಳು ಬಿದ್ದವು. ಈ ದೊಂಬಿ ನಡೆಯುತ್ತಿರುವಾಗ ಮಂಚದ ಮೇಲೆ ಬಿದ್ದಿದ್ದ ನನ್ನ ಲ್ಯಾಪ್‌ಟಾಪ್‌ನಿಂದ ಸೌಂಡು ಬರುತ್ತಿರುವಂತೆ ಅನ್ನಿಸಿತು. ಅದನ್ನ ಬೆಳಿಗ್ಗೆಯಿಂದ ಆನೇ ಮಾಡಿರಲಿಲ್ಲ. ಆದ್ರೆ ಈ ಸಂಭಾಷಣೆ ಮೆಲ್ಲ ವಾಲ್ಯೂಮ್ ಅಲ್ಲಿ ಲ್ಯಾಪ್‌ಟಾಪ್‌ನ ಸ್ಪೀಕರಿನಿಂದ ಬರ್ತಾ ಇತ್ತು-


"ನೋಡು ಆ ಜುಜುಬಿ ಬುಕ್ಸ್‌ಗಳಿಗಿರುವಷ್ಟು ಒಗ್ಗಟ್ಟು ನಮ್ಮ ಸಿನಿಮಾಗಳಿಗಿಲ್ಲ. ನನ್ನನ್ನ ಈ ಹೊಸ ಲ್ಯಾಪ್‌ಟಾಪ್ ತಗೊಂಡಾಗ ಡೌನ್ಲೋಡ್ ಮಾಡಿದ್ದು. ಇನ್ನೂ ಈ ಲ್ಯಾಪ್‌ಟಾಪಲ್ಲಿರೋದು ವಿಂಡೋಸ್ ಮೀಡಿಯಾ ಪ್ಲೇಯರ್ರಾ ಇಲ್ಲಾ ವಿಎಲ್‌ಸಿನಾ ಅಂತಾನೇ ನನಿಗೆ ಗೊತ್ತಾಗಿಲ್ಲ. ಇದಕ್ಕೆಲ್ಲ ಕೊನೆಗಾಣಿಸಲೇಬೇಕು" ಕುರೋಸಾವಾನ 'High and Low’ ದನಿ.


"ಇವ್ರೇ ನಾನೂ ಟೊರೆಂಟಲ್ಲಿ ನಿಮ್ಮ ಜೊತೇನೇ  ಬಂದಿದ್ದು. ಜನ್ರ  ಹತ್ರ 'ಡಾ ಸ್ಟ್ರೇಂಜ್‌ಲವ್‌' ಅದ್ಬುತ ಸಿನಿಮಾ ಅಂತ ಬಿಲ್ಡಪ್ ಕೊಡೋದೇ ಆಯ್ತು ಇವಂದು. ನಾನೂ ಸ್ಟ್ಯಾನ್ಲಿ ಕ್ಯೂಬ್ರಿಕ್ಕಿಗೇ ಹುಟ್ಟಿರೋದು. ನನ್ನ ಮೂಸೂ ನೋಡ್ತಿಲ್ಲ" 'Barry Lyndon’ ವಾಯ್ಸು.


"ವಾರಕ್ಕೊಂದ್ಸಲ ಆ ದರಿದ್ರ 'ಬಿಗ್ ಲೆಬೋಸ್ಕಿ' ನೋಡ್ತಾ ಇರ್ತಾನೆ. ಮೊದಲು ಅದಿರೋ ಫೋಲ್ಡರನ್ನೇ ಕರಪ್ಟ್ ಮಾಡ್ಬಿಡಣ ಏನಂತೀರಾ?" ಸ್ಕಾರ್ಸೇಸಿಯ 'ಕಿಂಗ್ ಆಫ್ ಕಾಮೆಡಿ' ರಾಬರ್ಟ್ ಡಿ ನಿರೋ ವಾಯ್ಸಲ್ಲೇ ಇದನ್ನ ಹೇಳ್ತಾ ಇತ್ತು. ಹಿಂಗೇ ಬಿಟ್ರೇ ಲ್ಯಾಪ್‌ಟಾಪ್‌ನ ದೆಂಗಿ ದೇವ್ರು ಮಾಡ್ಬಿಡ್ತಾವೆ ಅಂತ ನಾನು ರಪ್ ಅಂತ ಸ್ವಿಚ್ ಆನ್ ಮಾಡಿ ಡಿಸ್ಕ್ ಫಾರ್ಮ್ಯಾಟ್ ಮಾಡೋ ತರ ಡವ್ ಮಾಡಿದಮೇಲೆ ಸ್ಪೀಕರ್ ಸೈಲೆಂಟ್ ಆಯ್ತು. ಶೆಲ್ಫ್ ಮೇಲೆ ಬುಕ್‌ಗಳ ಜಗಳ ಮುಂದುವರೀತಾನೇ ಇತ್ತಲ್ಲ ಮಾಡ್ತೀನಿ ತಡೀರಿ ನಿಮಿಗೆ ಅಂತ ಹಾಲ್‌ನಲ್ಲಿ ಧಾರವಾಹಿ ನೋಡ್ತಿದ್ದ ನಮ್ಮಮ್ಮನನ್ನ ಕೂಗಿ "ನನ್ನ ಬುಕ್‌ಗಳನ್ನೆಲ್ಲ ತೂಕಕ್ಕೆ ಹಾಕಿಬಿಡು" ಅಂದೆ. ಆ ಕಡೆಯಿಂದ ಉತ್ತರ ಬರುವುದರೊಳಗೆ ಶೆಲ್ಫ್ ಮೊದಲಿನ ತರ ಆಗಿತ್ತು. ಇವಾಗ ನಾನು ಮತ್ತೆ ಬಿಗ್ ಲೆಬೋಸ್ಕಿ ನೋಡ್ತಾ ಇರೋದು ಕಂಡು ಪುಸ್ತಕಗಳೆಲ್ಲಾ ಗೋಡೆ ಕಡೆ ಮುಖ ಮಾಡಿ ನಿಂತಿದಾವೆ. ನಿತಿನನ ಶಾರ್ಟ್ ಫಿಲ್ಮ್ ಸ್ಕ್ರಿಪ್ಟ್ ಲ್ಯಾಪ್‌ಟಾಪಲ್ಲಿ ಗೊರಾಗೊರಾ ಅಂತಿದೆ.




Friday, 15 December 2023

ನಮ್ಮ ಪ್ರೀತಿಯ ರಾಮು

 ನನಿಗೆ ಒಂದು ಒಂಬತ್ತು ವರ್ಷ ಅವಾಗ. ಜೋಗಿ ರಿಲೀಸಾಗಿದ್ದ ಟೈಮು. ಅವಾಗ ಅಷ್ಟು ಸಿನಿಮಾ ನೋಡೋ ಚಟ ಇರಲಿಲ್ಲ. ಆದ್ರೂ ಎಲ್ರೂ ಜೋಗಿ ಜೋಗಿ ಅಂತಿದಾರೆ ಅಂದಮೇಲೆ ಆ ವಸ್ತು ನನಿಗೂ ಬೇಕು ಅಂತ ಹಠ ಹಿಡಿದು ಕುತ್ಕೊಂಡೆ. ಒಂದು ವಾರ ಅತ್ತು, ಊಟ ಬಿಟ್ಟು, ಒದೆ ತಿನ್ನೋ ಶಾಸ್ತ್ರ ಎಲ್ಲ ಮುಗಿದಮೇಲೆ ಹಾಳಾಗ್ ಹೋಗ್ಲಿ ತೋರುಸ್ಕೊಂಡು ಬಾ ಅಂತ ನಮ್ಮ ಒಬ್ಬಳು ಚಿಕ್ಕಮ್ಮನ ಜೊತೆಗೆ ಕಳಿಸಿದ್ರು. ದಾವಣಗೆರೆಯ ಪುಷ್ಪಾಂಜಲಿ ಟಾಕೀಸ್ ಮುಂದೆ ಹೋಗಿ ನೋಡಿದ್ರೆ ಜನ ಜಾತ್ರೆ. ಈ ರಶ್ಶಲ್ಲಿ ಟಿಕೆಟ್ ಸಿಗಲ್ಲ ಅಂತ ಗೊತ್ತಾಯ್ತು. ಪಕ್ಕದ ಗೀತಾಂಜಲಿಯಲ್ಲಿ ಗೌರಮ್ಮ ಐತೆ ಅದಕ್ಕೆ ಟಿಕೆಟ್ ಸಿಗತ್ತೆ ಅಂತ ನಮ್ಮನ್ನ ಬಿಟ್ಟು ಹೋಗಲು ಬಂದಿದ್ದ ನಮ್ಮ ಮಾಮ ಹೇಳಿದ. ನನಿಗೇನೂ ಜೋಗಿನೇ ನೋಡಬೇಕು ಅಂತ ಐಡಿಯಾಲಾಜಿಕಲ್ ಕಮಿಟ್ಮೆಂಟ್ ಇರ್ಲಿಲ್ಲ. ಸರಿ ಆಯ್ತು ಅಂತ ಗೌರಮ್ಮಕ್ಕೆ ಟಿಕೆಟ್ ತಗೊಂಡು ಹೋದ್ವಿ. ಅದು ಯಾವ ಲೆವೆಲ್ಲಿಗೆ ತಲೇಲಿ ಕುತ್ಕೊಂಡ್ಬಿಡ್ತು ಅಂದ್ರೆ ನೆಕ್ಸ್ಟು ಚೆಲುವಿನ ಚಿತ್ತಾರ ನೋಡೋ ತನಕ ನನಿಗೆ ಸಿನಿಮಾನ ಅಳೆಯೋ ಮೆಟ್ರಿಕ್ಕೇ ಗೌರಮ್ಮ ಆಗಿತ್ತು. ಸಿನಿಮಾದಲ್ಲಿ ಎರ್ಡೇ ಟೈಪು- ಗೌರಮ್ಮಕ್ಕಿಂತ ಚೆನ್ನಾಗಿರೋದು, ಗೌರಮ್ಮದಷ್ಟೇನು ಚೆನ್ನಾಗಿಲ್ದಿರೋದು.

ಮೂರ್ನಾಕು ತಿಂಗಳ ಮುಂಚೆ ನಮ್ಮಪ್ಪ ತೀರಿಕೊಂಡು ನಾನು ಓದೋಕೆ ಅಂತ ನಮ್ಮಜ್ಜಿ ಊರಿಗೆ ಬಂದಿದ್ದೆ. ನಮ್ಮಜ್ಜಿ ಮನೆಗೆ ಕ್ರಿಕೆಟ್ ನೋಡೋಕೆ ಬರ್ತಿದ್ದ ನಮ್ಮ ಮಾವನ ಗ್ಯಾಂಗಿನಲ್ಲಿ ಒಬ್ಬ ಅದೇ ದಿನ ರಿಲೀಸಾಗಿದ್ದ ಆಟೋ ಶಂಕರ್ ನೋಡಿಕೊಂಡು ಬಂದಿದ್ದ. ಅವನೂ ಉಪೇಂದ್ರನ ಫ್ಯಾನೇ. ಆಟೋ ಶಂಕರ್ ಚೆನಾಗೈತೆ ಆದ್ರೆ ಗೌರಮ್ಮದಷ್ಟು ಚೆನಾಗಿಲ್ಲ ಅಂತ ಹೇಳ್ದ. ಅವನೇ ರಾಮಣ್ಣ. 


ಹಿಂಗೆ ಪರಿಚಯವಾದ ರಾಮಣ್ಣ AKA ರಮೇಶ್ ನಂಗಿಂತ ಎಂಟೊಂಬತ್ತು ವರ್ಷ ದೊಡ್ಡವನು. ಅವಾಗ ಡಿಗ್ರಿ ಫಸ್ಟ್ ಇಯರ್ರೋ ಸೆಕೆಂಡ್ ಇಯರ್ರೋ ಓದ್ತಿದ್ದ ಅನ್ಸತ್ತೆ. ಕಾಲೇಜಿಗೆ ದಿನಾ ದಾವಣಗೆರೆಗೆ ಹೋಗ್ತಿದ್ದ ಇವನು ಹಳ್ಳಿಯಲ್ಲೇ ಬಿದ್ದಿರ್ತಿದ್ದ ನಮಗೆಲ್ಲ ದಿನಾ ಏನಾದ್ರೂ ಒಂದು ಹೊಸ ಹೊಸ ವಿಷಯಗಳನ್ನ ತಗೊಂಡು ಬರ್ತಿದ್ದ. ದಿನಾ ಬಸ್ಸಿಗೆ ಒಂದೇ ನೋಟ್‌ಬುಕ್ ಹಿಡಿದುಕೊಂಡು ಕಿವಿಗೆ ಇಯರ್ ಫೋನ್ ಸಿಕ್ಕಿಸಿಕೊಂಡು ಇಸ್ತ್ರೀ ಮಾಡಿದ ಬಟ್ಟೆ ಹಾಕಿಕೊಂಡು ಹೋಗ್ತಿದ್ದ ರಾಮಣ್ಣ ಆ ಕೊಂಪೆಯಲ್ಲಿ ಒಂದು ಸ್ಪೆಷಲ್ ಐಟಂ ತರ ಕಾಣ್ತಿದ್ದ. ಪ್ರತಿ ವಾರ ರಿಲೀಸಾಗ್ತಿದ್ದ ಸಿನಿಮಾಗಳನ್ನೆಲ್ಲ ಒಂದೂ ಬಿಡದಂಗೆ ನೋಡಿಕೊಂಡು ಬಂದು ಗೌರಮ್ಮಕ್ಕಿಂತ ಚೆನಾಗಿದ್ಯ ಇಲ್ವಾ ಅಂತ ಹೇಳ್ತಿದ್ದ. ಮುಂಗಾರುಮಳೆಯನ್ನ ಮೊದಲ ದಿನವೇ ನೋಡಿಕೊಂಡು ಬಂದು ಮೊಲದ ಸೀನ್ ಎಕ್ಸ್‌ಪ್ಲೇನ್ ಮಾಡ್ತಾ ಅತ್ತೂ ಅತ್ತೂ ಸಾಕಾಯ್ತು ಅಂತ ನನಿಗೆ ಅದರ ಬಗ್ಗೆ ಮೊದಲು ಸುದ್ದಿ ಮುಟ್ಟಿಸಿದವನು ಇವನೇ. ಆ ಟೈಮಲ್ಲಂತೂ ನಾನು ದೊಡ್ದವನಾದಮೇಲೆ ರಾಮಣ್ಣನ ತರ ಆಗಬೇಕು ಅಂತ್ ಫಿಕ್ಸ್ ಆಗ್ಬಿಟ್ಟಿದ್ದೆ.


ರಾಮಣ್ಣ ಅಷ್ಟು ಬುದ್ಧಿವಂತನಾಗಿ ನನಗೆ ಕಾಣ್ಸೋದಕ್ಕೆ ಆ ಊರೂ ಕಾರಣ ಇರಬಹುದು. ಯಾಕಂದ್ರೆ ಕ್ರಿಕೆಟ್ ನೋಡ್ತಿದ್ದಾಗ ಮಳೆಯಿಂದಾಗಿ ಪಂದ್ಯ ನಿಂತಿದೆ ಇನ್ನ ಮುವತ್ತು ನಿಮಿಷದಲ್ಲಿ ಪ್ರಾರಂಭವಾಗತ್ತೆ ಅಂತೆ ಕೆಳಗಡೆ ಬರ್ತಾ ಇರೋ ಇಂಗ್ಲಿಷ್ ಟೆಕ್ಸ್ಟನ್ನ ಓದಿ ಅದರ ಅರ್ಥವನ್ನ ಹೇಳಬಲ್ಲವನು ಅಲ್ಲಿದ್ದಿದ್ದು ಇವನೊಬ್ಬನೇ. ಜೊತೆಗೆ ಯಾವ್ದೇ ಕೆಲ್ಸಕ್ಕೂ ಬರೀ ಹಳೇಕಾಲದ ಮೆಥಡ್ಡನ್ನೇ ಹಿಡಿಯುತ್ತಿದ್ದ ಆ ಜನರ ನಡುವೆ ಹೊಸ ಕಾಲದ ಹೊಸ ಹೊಸ ಎಕ್ಸ್‌ಪೆರಿಮೆಂಟುಗಳನ್ನ ಇವನು ಮಾಡ್ತಿದ್ದ. ಒಂದ್ಸಲ ಗಣೇಶನ್ನ ಕೂರ್ಸಿದ್ದಾಗ ಎಲ್ರೂ ಮಾಮೂಲಿ ತರ ಬಾಳೇ ಕಂದು ಮಾವಿನಸೊಪ್ಪು ಒಂದೆರಡು ಡಿಮ್ ಅಂಡ್ ಡಿಪ್ ಲೈಟ್ ಸರ ತಂದು ನಾಳೆ ಟೇಬಲ್ ಮೇಲಿಟ್ಬಿಟ್ರೆ ಮುಗೀತು ಅನ್ಕೊಂಡಿದ್ರು. ಇವನು ಹುಡುಗರೆನ್ನೆಲ್ಲ ಗುಡ್ಡೆ ಹಾಕಿಕೊಂಡು ಅಲ್ಲಿ ತರಿಸಿದ್ದ ಬಣ್ಣದ ಪೇಪರ್‌ಗಳು ತೆಂಗಿನ ಗರಿಯ ಕಡ್ಡಿಗಳೆನ್ನಲ್ಲ ಕಟ್ ಮಾಡ್ತಾ ಕೂತ್ಕೊಂಡ. ರಾತ್ರಿ ಎರಡು ಮೂರು ಗಂಟೆಯಾದ್ರೂ ಮನೆಗೆ ಹೋಗಲು ಬಿಡದ ಇವನ ಮೇಲೆ ಎಲ್ರೂ ಸಿಟ್ಟು ಮಾಡಿಕೊಂಡಿದ್ರು. ಆದ್ರೆ ಕಟ್ ಮಾಡಿದ್ದ ಪೇಪರ್ರು ಕಡ್ಡಿಗಳನ್ನ ಅಂಟಿಸಿ ರಾಮಣ್ಣ ಅದಕ್ಕೊಂದು ಮಂಟಪದ ರೂಪ ಕೊಟ್ಟಮೇಲೆ ಎಲ್ರಿಗೂ ಸೈಕು. ಆ ಮಂಟಪದಲ್ಲಿ ಎಡಕ್ಕೆ ಬಲಕ್ಕೆ ಮತ್ತೆ ಮೇಲೊಂದು ತೂತು ಬಿಟ್ಟಿದ್ದ. ಯಾಕೆ ಅಂತ ನಾನು ಕೇಳಿದಾಗ ಬೆಳಿಗ್ಗೆ ತೋರಿಸ್ತೀನಿ ಇರು ಅಂದ. ಮಾರನೇ ದಿನ ಗಣಪತಿ ತರುವ ವೇಳೆಗೆ ಆ ಮೂರೂ ತೂತುಗಳಿಂದ ಒಂದೊಂದು ಬಣ್ಣದ ಲೈಟ್ ಬಿಟ್ಟು ಹೆಂಗಿದೆ ಅಂದ. ನಾನಂತೂ ಅಷ್ಟು ಪ್ಯಾಶನ್ನಿಂದ ಮಾಡಿರೋ ಗಣಪತಿ ಮಂಟಪಾನ ಮತ್ತೆಲ್ಲೂ ನೋಡಿಲ್ಲ.


ಪೇಪರ್ ಕಟ್ಟಿಂಗ್ ವಿಷಯ ಬಂದಿದ್ರಿಂದ ಇನ್ನೊಂದು ನೆನಪು ತಲೆಗೆ ಬಂತು. ನಾನು ಇವಾಗ ರಾಮಣ್ಣನ ಬಗ್ಗೆ ಹೇಳ್ತಾ ಇರೋ ತರಾನೆ ರಾಮಣ್ಣ ನಮ್ಮ ಎರಡನೇ ಮಾವನ ಬಗ್ಗೆ ಅಭಿಮಾನದಿಂದ ಅವಾಗಾವಾಗ ಹೇಳ್ತಿದ್ದ. ಅವನಿಗೆ ಚೆಸ್ ಆಡೋದಕ್ಕೆ ಕಲಿಸಿದ್ದೂ ಮಂಜು ಮಾಮನೇ ಅಂತೆ. ನಮ್ಮ ಮನೆಯಲ್ಲಿ ಚೆಸ್ ಪಾನ್‌ಗಳು ಇದ್ವು. ಆದ್ರೆ ಬೋರ್ಡ್ ಏನಾಗಿತ್ತೋ ಏನ್ ಕತೇನೋ ಇರಲಿಲ್ಲ. ರಾಮಣ್ಣ ನನ್ನ ಒಂದು ಉದ್ದನೇ ನೋಟ್‌ಬುಕ್ ಮೇಲೆ ಡಿಸ್ ಡಿಸೈನಾಗಿ ಹೆಸರು ಬರೆದು ಕೊಟ್ಟಿದ್ದ. ಅದು ತುಂಬಿದೆಯಾ ಅಂತ ಕೇಳ್ದ. ಅದು ತುಂಬಿ ವರ್ಷದ ಮೇಲಾಗಿತ್ತು. ತಂದುಕೊಟ್ಟೆ. ನಡುವೆ ಇರೋ ಹಾಳೇನೆಲ್ಲ ಕಿತ್ತು ಬರೀ ರಟ್ಟು ಮಾತ್ರ ಉಳಿಸಿಕೊಂಡ. ಸ್ಕೇಲ್‌ನಲ್ಲಿ ಆ ರಟ್ಟಿನ ಅಳತೆ ತಗೊಂಡು ಏನೋ ಲೆಕ್ಕಾಚಾರ ಹಾಕಿ ಬಾಕ್ಸ್‌ಗಳನ್ನ ಬರೆದು ಅದಕ್ಕೆ ಕಪ್ಪುಬಿಳುಪಿನ ತರ ಕಾಣುವಂತೆ ಬಣ್ಣ ತುಂಬಿದ. ಸ್ವಲ್ಪ ಹೊತ್ತಿನಲ್ಲೇ ಅರವತ್ನಾಲ್ಕು ಮನೆಗಳ ಒಂದು DIY ಚೆಸ್ ಬೋರ್ಡ್ ರೆಡಿಯಾಯ್ತು. ಆ ಚೆಸ್ ಬೋರ್ಡಿನಲ್ಲಿ ಅವನ ಜೊತೆ ಎಷ್ಟು ಮ್ಯಾಚ್ ಆಡಿದ್ದೀನೋ ಲೆಕ್ಕ ಇಲ್ಲ. ಅವನೇ ಹೇಳಿಕೊಟ್ಟ ಟ್ರಿಕ್ಸ್‌ಗಳನ್ನ ಉಪಯೋಗಿಸಿಕೊಂಡು ಅವನನ್ನ ಸೋಲಿಸಿದಾಗ ರಾಮಣ್ಣ ಹೆಮ್ಮೆ ಪಡ್ತಿದ್ದ. 


ಆದ್ರೆ ನಾನು ಏಳನೇ ಕ್ಲಾಸ್ ಮುಗಿಸಿ ಮತ್ತೆ ನಮ್ಮೂರಿಗೆ ಬಂದಮೇಲೆ ರಾಮಣ್ಣನ ಸಂಪರ್ಕ ಕಟ್ಟಾಗಿ ಹೋಯ್ತು. ಅವಾಗಾವಾಗ ಅಜ್ಜಿ ಊರಿಗೆ ಹೋದಾಗ ಸಿಕ್ಕು ಮಾತಾಡಿಸ್ತಿದ್ದ ಅಷ್ಟೇ. ಆದ್ರೆ ಕಾಲ ಮುಂದುವರೆದಂತೆ ರಾಮಣ್ಣ ಅಷ್ಟು ಎನಿಗ್ಯ್ಮ್ಯಾಟಿಕ್ ಅನ್ಸಿದ್ದು ಯಾಕೋ ಬರೀ ನಾಸ್ಟೆಲ್ಜಿಯದ ಮಹಿಮೆ ಇರಬಹುದು ಅನ್ಸೋಕೆ ಶುರುವಾಗಿತ್ತು. ಯಾಕಂದ್ರೆ ಇತ್ತೀಚೆಗೆ ಮಾತಾಡಿಸುವಾಗ ಮುಂಚಿನ ತರ ಯಾವ್ದೇ ಮ್ಯಾಜಿಕಲ್ ಅಂಶ ಅವನಲ್ಲಿ ಕಾಣ್ತಾ ಇರಲಿಲ್ಲ. ಫೇಸ್ಬುಕ್ಕಲ್ಲಿ "ಭಕ್ತಿಯಿಂದ ಶೇರ್ ಮಾಡಿ ಒಳ್ಳೇದಾಗತ್ತೆ" ಅನ್ನೋ ಕ್ಯಾಪ್ಷನ್ ಇರೋ ಏಳು ಹೆಡೆಯ ನಾಗರ ಹಾವಿನ ಫೋಟೋಶಾಪ್ಡ್ ಇಮೇಜ್ ಶೇರ್ ಮಾಡ್ತಿದ್ದ. 


ನಾನು ಸಿನಿಮಾ ಗಿನಿಮಾ ಅನ್ಕೊಂಡು ಓಡಾಡ್ತಿರೋ ವಿಷಯಾನೆಲ್ಲ ಅವನತ್ರ ಹಂಚ್ಕೊಂಡಿದ್ರೆ ಖುಷಿ ಪಡ್ತಿದ್ದ ಅನ್ಸತ್ತೆ. ಆದ್ರೆ ಅದಕ್ಕೆ ಟೈಮ್ ಬರ್ಲೇ ಇಲ್ಲ. ಹೋದ ವರ್ಷ ಉಚ್ಚಂಗಿದುರ್ಗದ ಹತ್ರ ಬೈಕ್‌ನಲ್ಲಿ ಬಿದ್ದು ತೀರಿಕೊಂಡ ಅಂತ ಸುದ್ದಿ ಬಂತು. ನಾಲ್ಕೈದು ವರ್ಷದ ಇಬ್ಬರು ಮಕ್ಕಳನ್ನ ಬಿಟ್ಟು ಹೋಗಿದ್ದಾನೆ. ಆ ಊರಲ್ಲೇನೂ ಅಂತಹ ಕ್ರಾಂತಿಕಾರಿ ಬದಲಾವಣೆಗಳು ಆಗಿಲ್ಲ. ಅವನ ಮಕ್ಕಳಿಗೆ ಚೆಸ್ ಬೋರ್ಡ್ ಮಾಡಿಕೊಡೋ ಅಂತವ್ರು ಯಾರಾದ್ರೂ ಆ ಊರಲ್ಲಿದ್ದಾರ? ಗೊತ್ತಿಲ್ಲ.  


Friday, 1 September 2023

Problem with urban Kannada filmmakers

"ನಾನು ಇದನ್ನ ಯಾವತ್ತೂ ಕೇಳಿರ್ಲಿಲ್ಲ"

"I didn't ask for any of this"

ಇವೆರಡೂ ಲೈನ್ ಓದ್ರಿ. ಯಾವುದು ಒರಿಜಿನಲ್ ಯಾವುದು ಟ್ರಾನ್ಸ್ಲೇಷನ್ ಅನ್ಸತ್ತೆ ನಿಮಿಗೆ?

ಈಗ ತಾನೆ ನೋಡಿಕೊಂಡು ಬಂದ "ಸಪ್ತಸಾಗರದಾಚೆ ಎಲ್ಲೋ" ಸಿನಿಮಾದಲ್ಲಿ ಈ ಕನ್ನಡ ಡೈಲಾಗಿಗೆ ಈ ಸಬ್‌ಟೈಟಲ್ ಇತ್ತು. ಇಂಗ್ಲಿಷಲ್ಲಿ ಬರೆದು ಆಮೇಲೆ ಕನ್ನಡಕ್ಕೆ ಬದ್ಲಾಯಿಸಿದಾರೆ ಅಂತ ಯಾವನ್ ಬೇಕಾದರೂ ಹೇಳಬಹುದು. ಬರೀ ಇದೊಂದು ಸಿನಿಮಾ, ಇದೊಂದು ಡೈಲಾಗ್ ಅಂತಲ್ಲ. ಇತ್ತೀಚೆಗೆ ಬರುತ್ತಿರೋ ಹೊಸ ಪೀಳಿಗೆಯ ಕನ್ನಡ ಸಿನಿಮಾಗಳಲ್ಲಿ ಪ್ಯಾಟರ್ನೇ ಆಗಿ ಹೋಗಿರುವಂತಹ ವಿಷಯ ಇದು.

ಯಾಕ್ ಹಿಂಗಾಗ್ತಿದೆ? ಯಾಕಂದ್ರೆ ಹೆಚ್ಚುಕಮ್ಮಿ ಎಲ್ಲಾ ಅರ್ಬನ್ ಫಿಲ್ಮ್‌ಮೇಕರ್ಸ್‌ಗಳು ಯೋಚಿಸೋದು ಇಂಗ್ಲಿಷ್‌ನಲ್ಲಿ. ಬರೆಯೋದೂ ಕೂಡಾ ಇಂಗ್ಲಿಶ್ ಲಿಪಿಯಲ್ಲೇ. ಅದು ಕನ್ನಡ ಸಿನಿಮಾವಾಗಿ ತೆರೆ ಮೇಲೆ ಬಂದಾಗ ಈ ತರ ಅಧ್ವಾನ ಆಗಿರತ್ತೆ. ಅದಕ್ಕೇ ಕೆಜಿಎಫ್‌ನಲ್ಲಿ ಆವಮ್ಮ ಆತರ ರೋಬೋಟಿಕ್ ಕನ್ನಡ ಮಾತಾಡೋದು. ಇತ್ತೀಚಿಗೆ ಬಂದ "ಆಚಾರ್ ಅಂಡ್ ಕೋ" ಅಲ್ಲಂತೂ ಆ ಹುಡುಗಿ ತನ್ನ ತಂಗಿಗೆ ತಂಗಿ ಗಂಡ ಹೊಡೀತಿದ್ದಾನೆ ಅಂತ ಮದುವೆ ಮನೆಗೆ ಬಂದ ಜನಕ್ಕೆಲ್ಲ ಸಿಟ್ಟಿನಲ್ಲಿ ಕೂಗಬೇಕು. ಅದಕ್ಕೆ ಆ ಹುಡುಗಿ ಸಹಜವಾದ ಕನ್ನಡವಾಗಿದ್ದರೆ ಏನು ಹೇಳಬಹುದು ಅಂತ ಗೆಸ್ ಮಾಡಿ ನೋಡನ…

"ನೋಡಿ ಈ ವ್ಯಕ್ತಿ ನನ್ ತಂಗೀಗೆ ಹೊಡೀತಿದಾನೆ" ಅಂತಾಳೆ. ನಮ್ತಾಯಾಣೆಯಾಗ್ಲೂ ಯಾವನ್ ಗುರು ಹಿಂಗ್ ಕನ್ನಡ ಮಾತಾಡ್ತಾನೆ 😑

ಏನ್ ಮಹಾ ಆಯ್ತು ಬಿಡಲೋ ಇದ್ರಿಂದ ಅಂತ ನಿಮಿಗೆ ಅನ್ಸಿದ್ರೆ ಖಂಡಿತಾ ಸರ್ಫೇಸ್ ಲೆವೆಲ್ ಗ್ಲಿಚ್ ಅಲ್ಲ ಕಣ್ರಿ ಇದು. ಕನ್ನಡದಲ್ಲೇ ಸ್ಕ್ರಿಪ್ಟ್ ಬರೀಬೇಕು ಅಂತ ಹೇಳೋ ತರದ ರೋಷಾಭಿಮಾನದ ಪೋಸ್ಟಂತೂ ಅಲ್ವೇ ಅಲ್ಲ. ಕೆನ್ ಲೋಚ್ ಯಾರ್ಕ್‌ಷೈರ್ ಇಂಗ್ಲಿಷ್‌ನಲ್ಲಿ ಸಿನಿಮಾ ಮಾಡಿದಾಗ ಅವನಿಗೆ ಒಂದು ಪ್ರಶ್ನೆ ಕೇಳಿದ್ದರು. ಆ ಆ್ಯಕ್ಸೆಂಟ್ ಬಿಟ್ಟು ಸ್ಟಾಂಡರ್ಡ್ ಇಂಗ್ಲಿಷ್‌ನಲ್ಲಿ ಸಿನಿಮಾ ಮಾಡಬಹುದಿತ್ತಲ್ಲ ಅಂತ. ಅದಕ್ಕೆ ಕೆನ್ ಲೋಚ್ ಉತ್ತರ - "We will lose more than the accent" ಅಂತ. ಅಂದ್ರೆ ಜನರ ಹಾವಭಾವ, ಜೀವನಶೈಲಿ, ಅವರ ಇಡೀ ವ್ಯಕ್ತಿತ್ವವೇ ಅವರು ಮಾತಾಡುವ ಭಾಷೆಯ ಜೊತೆಗೆ ಬೆರೆತು ಹೋಗಿರುತ್ತೆ. ಪಾತ್ರಗಳು ಈ ತರ ಬುಕ್ಕಿಶ್ ಕನ್ನಡ ಮಾತಾಡ್ತಿವೆ ಅಂದ್ರೆ ಆ ಫಿಲ್ಮ್‌ಮೇಕರ್ ಆ ಪಾತ್ರಗಳ ಪ್ರಪಂಚಕ್ಕೆ ಇಳಿಯೋ ಪ್ರಯತ್ನಾನೇ ಮಾಡಿಲ್ಲ ಅಥವಾ ತಾನು ಬರೆಯುತ್ತಿರೋ ಪಾತ್ರಗಳಿಂದ ಒಂದೈವತ್ತು ಕಿಲೋಮೀಟರ್ ದೂರ ಇದಾನೆ ಅಂತ ಅರ್ಥ.

ಸುಮ್ಮನೆ ಈ ಡೈಲಾಗ್ ಕೇಳಿ, ಸೂರಿಯ ಜಂಗ್ಲಿ ಸಿನಿಮಾದ್ದು- "ದೇವ್ರೇ ನನ್ನ ಈ ಸ್ಟೇಜ್‌ವರ್ಗೂ ಬದುಕ್ಸ್‌ಬೇಡಪ್ಪ. ಒಂದ್ ನೈನ್ಟಿ ಕುಡ್ದು, ತಲೆಮಾಂಸ ತಿಂದು, ವೈಟ್ ರೈಸ್ ತಿಂತಿದ್ದಂಗೆ ಪಟ್ ಅಂತ ಕರ್ಕೊಂಬಿಡು.‌ ಮತ್ತಲ್ಲೇ ಹೋತಾ ಇರ್ಬೇಕು". ಸುಮ್ನೆ ಪಾಸಿಂಗ್ ಡೈಲಾಗ್ ಅನ್ಸಿದ್ರೂನು ಆ ಪಾತ್ರದ ಮತ್ತು ಬೆಂಗಳೂರಿನ ಕ್ಯಾರೆಕ್ಟರ್ರೇ ಐತೆ ಈ ಡೈಲಾಗಲ್ಲಿ. ಯಾರಾದ್ರು ಡೈಲಾಗ್ ರೈಟಿಂಗ್ ಕಲಿಬೇಕು ಅಂದ್ರೆ ಸೂರಿ ಸಿನಿಮಾ ನೋಡಬೇಕು.

ಇಷ್ಟೆಲ್ಲ ಯಾಕೆ ಬರೆದೆ ಅಂದ್ರೆ ಇಷ್ಟು ದೊಡ್ಡ ಕೋಣೆಯಲ್ಲಿರೋ ಆನೆ ಬಗ್ಗೆ ಯಾರಾದ್ರೂ ಮಾತಾಡ್ಲೇಬೇಕಲ್ವಾ? I mean somebody has to address the elephant in the room right?

Wednesday, 10 May 2023

ಯೀಮಾ ಸುಮಾಕ್- ಇಂಕಾ ರಾಜಕುಮಾರಿ

ದಕ್ಷಿಣ ಅಮೆರಿಕದ ಪೆರು ದೇಶದ ಆ್ಯಂಡಿಸ್ ಪರ್ವತ ಶ್ರೇಣಿಗಳ ಒಂದು ಸಣ್ಣ ಹಳ್ಳಿಯಲ್ಲಿ ಒಬ್ಬಳು ಚಿಕ್ಕ ಹುಡುಗಿ ಅವಳ ಪಾಡಿಗೆ ಅವಳು ಹಾಡಿಕೊಂಡಿದ್ದಳು. ಒಂದ್ಸಲ ಹೆಂಗೋ ಒಬ್ಬ ಸಿಟಿ ವ್ಯಕ್ತಿಯ ಕಣ್ಣಿಗೆ ಬಿದ್ದು ಅವನು ಬಾರಮ್ಮ ನಿನ್ನ್ ರೇಂಜ್ ಬೇರೇನೆ ಐತೆ ನಿನ್ನ ಎಲ್ಲಿಗ್ ಕರ್ಕೊಂಡ್ ಹೋಗ್ತೀನಿ ನೋಡು ಅಂತ ಪೆರುವಿನ ರಾಜಧಾನಿ ಲೀಮಾಗೆ ಕರೆದುಕೊಂಡು ಹೋಗಿ ಈಕೆಯ ಕೈಯಲ್ಲಿ ಹಾಡಿಸಲು ಶುರು ಮಾಡ್ತಾನೆ. ಅಲ್ಲಿಂದ ಶುರುವಾಗುವ ಈಕೆಯ ಮ್ಯೂಸಿಕ್ ಕರಿಯರ್ ಮುಂದೆ ಹಾಲಿವುಡ್ಡು, ಯೂರೋಪು, ಸೋವಿಯತ್ ಯೂನಿಯನ್‌ಗಳಲ್ಲೆಲ್ಲ ಹಾವಳಿ ಎಬ್ಬಿಸತ್ತೆ. ಲ್ಯಾಟಿನ್ ಅಮೆರಿಕದ ಇಂಡಿಯನ್ ಹುಡುಗಿ ಒಬ್ಬಳು ಉತ್ತರ ಅಮೆರಿಕದ ಬೆಸ್ಟ್ ಸೆಲ್ಲಿಂಗ್ ಚಾರ್ಟ್‌ಗಳನ್ನ ಕೆಡವಿ ಬಿಸಾಕೋದು ಏನ್ ಸಣ್ಣ ವಿಷಯ ಅಲ್ಲ.

ಇದನ್ನೆಲ್ಲ ಅವಳು ಮಾಡಿದ್ದು ಅವಳ ಊರಿನ ಜನಪದ ಹಾಡುಗಳ ಮೂಲಕಾನೆ. ಸಾಮಾನ್ಯ ಮನುಷ್ಯರಿಗಿಂತ ಎರಡುಪಟ್ಟು ವೋಕಲ್ ರೇಂಜ್ ಈಕೆಯ ದನಿಯಲ್ಲಿತ್ತು. ನಾಕೂವರೆ-ಐದು ಆಕ್ಟೇವ್ ತನಕಾನೂ ಅವಳ ಧ್ವನಿ ಹೋಗುತ್ತಿತ್ತು ಅಂತ ಹೇಳ್ತಾರೆ. ಇದೆಲ್ಲ ಟೆಕ್ನಿಕಲ್ ಟರ್ಮ್ ಯಾವನಿಗೂ ಅರ್ಥ ಆಗಲ್ಲ. ಆಕೆಯ ಹಾಡುಗಳನ್ನ ಕೇಳಿದ್ರೆ ಆಕೆ ಗಂಟಲನ್ನೇ ಒಂದು ಇನ್ಟ್ರುಮೆಂಟ್ ತರ ಬಳಸೋದು ಮಾತ್ರ ರಪ್ ಅಂತ ಮಕಕ್ಕೆ ಹೊಡಯತ್ತೆ. ಇಂತಾಕೆಯನ್ನ ಹಾಲಿವುಡ್ ಸುಮ್ಮನೆ ಬಿಡತ್ತಾ. ಆಲ್ಬಂ ಕವರ್ ಮೇಲಿನ ಇವಳ ಚಿತ್ರಗಳು ಮತ್ತು ಇವಳ ಧ್ವನಿಯಲ್ಲಿದ್ದ ಮಾದಕತೆ ಎಲ್ಲಾ ಸೇರಿಸಿ "ಎಕ್ಸಾಟಿಕಾ" ಅಂತ ಒಂದು ಹೊಸ ಜಾನರ್ರನ್ನೇ ಸೃಷ್ಟಿಸಲಾಯ್ತು. 

ಇವಾಗ ಝೀ ಕನ್ನಡದ ಸರಿಗಮಪದಲ್ಲಿ ಹಳ್ಳಿಯವರಿಗೆ ಪಂಚೆ ಹಾಕ್ಸಿ, ಸಾಬರ ಹುಡುಗಿಗೆ ಬುರ್ಖಾ ಹಾಕ್ಸಿ ಎನ್ಕ್ಯಾಶ್ ಮಾಡಿಕೊಳ್ತಾರಲ್ಲ ಅದೇ ತರ ಈಕೆಯ ಆಲ್ಬಂ ಕವರ್‌ಗಳೂ ಸೌತ್ ಅಮೆರಿಕಾದ ನೇಟಿವ್ ವೇಷಗಳಿಂದಾನೆ ತುಂಬಿದಾವೆ. ಇದರ ಜೊತೆಗೆ ಈಕೆ ಇಂಕಾ ಸಾಮ್ರಾಜ್ಯದ ಕೊನೆಯ ದೊರೆ ಅಟಾಹುಲ್ಪಾ ವಂಶದವಳು ಅಂತೆಲ್ಲಾ ದಂತಕತೆಗಳನ್ನ ಹಾಲಿವುಡ್ಡೇ ಸೃಷ್ಟಿಸಿ ಹರಿಯಬಿಟ್ಟಿತ್ತು. ಇಂತಾ ಯಾವ ಕತೆಗಳನ್ನೂ ಯೀಮಾ ಇದು ಸುಳ್ಳು ಗುರು ಅಂತ ಹೇಳೋಕೆ ಹೋಗಲಿಲ್ಲ. ಇಂತದನ್ನೆಲ್ಲ ಆಕೆ ಎಂಜಾಯ್ ಮಾಡ್ತಿದ್ದಳು. ಮೊನ್ಮೊನ್ನೆ ಸ್ಪಾಟಿಫೈ ಅಲ್ಲಿ ಈವಮ್ಮ ಸಿಕ್ಕಮೇಲೆ ಈಕೆಯ ಒಂದು ಹಾಡನ್ನ ಬಿಗ್ ಲೆಬೋಸ್ಕಿಯಲ್ಲಿ ಕೋಅನ್ ಬ್ರದರ್ಸ್ ಯೂಸ್ ಮಾಡಿದ್ದಾರೆ ಅಂತ ಕೇಳ್ತಾ ಕೇಳ್ತಾ ರಿಯಲೈಸ್ ಆಯ್ತು. ಪುರ್ಸೊತ್ ಸಿಕ್ರೆ ಕೇಳಿ ಮಜಾ ಇದಾವೆ ಹಾಡುಗಳು :)