Tuesday, 10 March 2026

Sucker fish

    (ಬೆಳಗಾ ಮುಂಜಾನೆ ಹಿಂಗೊಂದು ಕನಸು ಬಿದ್ದಿತ್ತು. ಮರೆತು ಹೋಗಬಾರದು ಅಂತ ಈ ಡಾಕ್ಯುಮೆಂಟೇಷನ್)

    Never meet your heroes ಅಂತ ಒಂದು ನಾಣ್ಣುಡಿ ಇದೆ. ಇದು ಸಿನಿಮಾದವರಿಗೆ ಒಪ್ಪೋ ಅಷ್ಟು ಯಾರಿಗೂ ಒಪ್ಪಲ್ಲ. "ಅವ್ರು ಒಂದ್ ಕಾಲ್ದಲ್ಲಿ ಒಳ್ಳೇ ಸಿನಿಮಾ ಮಾಡ್ತಿದ್ರು ಹೌದು. ಆದ್ರೆ ಈಗ ಖಾಲಿ ಡಬ್ಬ" ಅಂತ ಯಾರಾದ್ರೂ ಹೇಳಿದ್ರೆ ರಕ್ತಪಾತ ಆಗೋ ಲೆವೆಲ್ಲಿಗೆ ನೀವೇ ನಿಮ್ಮ ಗೆಳೆಯರ ಹತ್ರ ಜಗಳ ಆಡಿರ್ತೀರಿ. ಅವರ ಜೊತೇನೆ ಕೆಲ್ಸ ಮಾಡೋ ಸಂದರ್ಧ ಬರತ್ತೆ. ಅವಾಗ ಆ ಲೌಡೆ ಅವತ್ತು ಹೇಳಿದ್ದು ನಿಜ ಅಲ್ವಾ ಗುರು. ಹಿಮಾಲಯ ಹತ್ತಿ ಇಳಿದು, ಆಂಡೀಸ್ ಮೌಂಟೆನ್ಸ್‌ನ ಒಳ್ಳೇ ರೋಡ್ ಹಂಪ್ಸ್ ತರ ದಾಟಿ ಬಂದಿರೋ ಈ ಮನುಷ್ಯ ಈಗ ದಾರೀಲಿ ಮನೆ ಕಟ್ಟೋಕೆ ಹಾಕಿರೋ ಜಲ್ಲಿ ಕಲ್ಲು ರಾಶಿ ಹಾಯೋಕೆ ಉಸ್ಸುಬುಸ್ಸು ಅಂತಿದಾನಲ್ಲಪ್ಪ ಅಂತನ್ಸತ್ತೆ. ಈ ಸಂಪತ್ತಿಗಾ ನಾನು ಮನೆಮಠ ಬಿಟ್ಟು ಸಿನಿಮಾ ಮಾಡಕ್ ಬಂದಿದ್ದು ಅನ್ಸತ್ತೆ. ಇದ್ಕಿಂತ ಊರಿಗ್ ವಾಪಸ್ ಹೋಗಿ ಕೂಲಿ ಮಾಡ್ಕೊಂಡಿರೋದೇ ಮೇಲು ಅನ್ಸತ್ತೆ.

    ಹಂಗಂತೀವಿ ಅಷ್ಟೇ. ಸಿನಿಮಾಕ್ಕೆ ಸಿನಿಮಾದವ್ರು ಬಯ್ಯೋ ಅಷ್ಟು ಇನ್ಯಾರೂ ಬಯ್ಯಲ್ಲ. ಹಂಗ್ ಬಯ್ದೋರೆಲ್ಲ ಸಣ್ಣದೋ ದೊಡ್ಡದೋ ಎಂತದೋ ಒಂದು ಕೆಲ್ಸ ಮಾಡ್ಕೊಂಡು ಸಿನಿಮಾಕ್ಕೇ ಆತುಕೊಂಡಿರ್ತಾರೆ. Sucker fish ಅಂತ ಒಂದಿದೆ. ಶಾರ್ಕ್ ಬೆನ್ನ ಮೇಲೆ ಅಂಟಿಕೊಂಡು ಅದು ಹೋದಲ್ಲೆಲ್ಲ ಅದ್ರ ಜೊತೆಗೆ ಹೋಗ್ತಾ ಅದು ತಿಂದಿದ್ರಲ್ಲಿ ಚೂರುಪಾರು ಇದೂ ತಿನ್ತಾ ಹೊಟ್ಟೆ ಹೊರೆಯತ್ತೆ. ಈ ಸಿನಿಮಾ ಶಾರ್ಕ್‌ಗೆ ಜೋತುಕೊಂಡು ಆ ಶಾರ್ಕಿಗೇ ಬಯ್ಕೊಂಡು ಓಡಾಡೋ ಈ Sucker fishಗಳು ಯಾವೂ ಶಾರ್ಕ್‌‍ನ ಬಿಟ್ಟು ಯಾವತ್ತೂ ಹೋಗಲ್ಲ. ಶಾರ್ಕ್ ತಿಂದು ಬಿಟ್ಟಿದ್ರಲ್ಲಿ ಚೂರುಪಾರು ಅಂದ್ರೆ- ನೀವೇ ಫೇಸ್‌ಬುಕ್ಕಲ್ಲಿ ಬಯ್ಯೋ ಪಾರ್ಟಿಗೆ ಎಲೆಕ್ಷನ್ ಟೈಮಲ್ಲಿ ಆಡ್ಸ್ ಬರಿಯೋದು, ಟ್ರಾನ್ಸ್ಲೇಟ್ ಮಾಡೋದು, ಅವ್ರ ಇವ್ರ ಸಿನಿಮಾಕ್ಕೆ ಸಬ್‌ಟೈಟಲ್ ಬರಿಯೋದು, ಫೋಟೋಗ್ರಫಿ ಮಾಡೋದು, ಯಾವ್ದೋ ಆಡಿಯೋ ಕಂಪನಿಗೆ ಭಕ್ತಿಗೀತೆ ವೀಡಿಯೋ ಎಡಿಟ್ ಮಾಡಿಕೊಡೋದು ಇತ್ಯಾದಿ.

    ನಾನೂ ಅದೇ ತರ ಶಾರ್ಕ್‌ಗೆ ಜೋತುಬಿದ್ದಿರೋ ಒಂದು Sucker fish.

    ಈ ಸಲ ನಾಗರ ಪಂಚಮಿಗೆ ಊರಿಗೆ ಹೋದಾಗ ನೆಂಟ್ರೆಲ್ಲ ಅಜ್ಜಿ ಮನೆಯಲ್ಲಿ ಸೇರಿದ್ರು. ಅಲ್ಲೊಬ್ಬಳು ಫಾರಿನ್ ಹುಡುಗಿ ಇದ್ಲು. ಉಮಾ ಥರ್ಮನ್ ತರ ಬ್ಲಾಂಡ್ ಕೂದ್ಲು. ಸ್ಕಾರ್ಲೆಟ್ ಜೋಹಾನ್ಸನ್ ತರ ಕೆಂಪು ಮೈಯಿ. ಹರುಕು ಮುರುಕು ಕನ್ನಡ ಜತೆಗೆ ಇಂಗ್ಲಿಷ್ ಮಾತಾಡ್ಕೊಂಡು ನನ್ನ ಕಸಿನ್ಸ್ ಜತೆಗೆ ಚಕ್ಕಂಬಕ್ಕಲ ಹಾಕ್ಕೊಂಡು ಹೋಳಿಗೆಗೆ ಹೂರಣ ಅರೀತಿದಾಳೆ. ಅಲೇ ಇವ್ಳಾ. ಯಾರ್ ಇವ್ಳು? ಎಲ್ಲಾ ಬಿಟ್ಟು ನಮ್ಮಜ್ಜಿ ಮನೆಯಲ್ಲಿ ಏನ್ ಮಾಡ್ತಿದ್ದಾಳೆ? ನನ್ನ್ ತಂಗಿ ಇಂಫೋಸಿಸ್ ಅಲ್ಲಿ ಕೆಲ್ಸ ಮಾಡ್ತಾಳೆ. ಅವಳ ಕೊಲೀಗ್ ಇರಬಹುದಾ? ನಡುಮನೆಯ ಹೊಸಲ ಹತ್ರ ನಿಂತ್ಕೊಂಡು ಈ ಹೆಂಗಸರ ಮಾತನ್ನ ಕದ್ದು ಸ್ವಲ್ಪ ಹೊತ್ತು ಆಲಿಸಿದೆ. ನನ್ನ್ ತಂಗಿ ಕೊಲೀಗೂ ಅಲ್ಲ? ಯಾರಿರಬಹುದು. ನನ್ನ ಕಸಿನ್ಸ್ ಅವಳಿಗೆ ಪುಟ್ಟಕ್ಕನ ಮಕ್ಕಳು ಸೀರಿಯಲ್ ಬಗ್ಗೆ ಹೇಳ್ತಿದ್ರು. ಅವಳು ಇವರಿಗೆ ಗೇಮ್ ಆಫ್ ಥ್ರೋನ್ಸ್ ನೋಡಿ ಅಂತ ಸಲಹೆ ಕೊಡ್ತಿದ್ಲು. ಅದ್ರಲ್ಲಿರೋ ಸೆಕ್ಸ್ ಸೀನ್ಸ್ ನೋಡಿ ಇವರು ಯಾವ ತರ ಹೌಹಾರಿ ಬಾಯಿ ಬಡಿದುಕೊಳ್ಳಬಹುದು ಅಂತ ನೆನೆಸಿಕೊಂಡು ನನಿಗೆ ನಗು ಬಂತು. ಸ್ವಲ್ಪ ಜೋರಾಗೇ ನಕ್ಕೆ ಅನ್ಸತ್ತೆ. ಎಲ್ಲರೂ ನನ್ನ ಕಡೆ ತಿರುಗಿದರು. ಆ ಹುಡುಗಿಯೂ ನನ್ನ ಕಡೆ ತಿರುಗಿ ನನ್ನ ಕಣ್ಣಲ್ಲೇ ಕಣ್ಣು ನೆಟ್ಟು ನೋಡ್ತಿದ್ದಾಳೆ. ನನಿಗೆ ನಾಚಿಕೆಯಾಗಿ ಸತ್ತು ಹೋದ ನಮ್ಮಜ್ಜನ ಫೋಟೋ ಕಡೆ ನೋಡಿದಂತೆ ಮಾಡಿದೆ. ಬಾ ಇಲ್ಲಿ ಅಂತ ಕರೆದು ಅವಳಿಗೆ ಇವನು ದೊಡ್ಡ ರೈಟರ್‍ರು ಅಂತ ಪರಿಚಯ ಮಾಡಿಕೊಟ್ಟರು. ನನ್ನ ಸಿನಿಮಾ ಫ್ರೆಂಡ್ಸ್ ಇದನ್ನ ಕೇಳಿಸಿಕೊಂಡಿದ್ರೆ ಅದೆಲ್ಲೆಲ್ಲಿಂದ ನಗ್ತಿದ್ರೋ. ಆ ಹುಡುಗಿ ಅವಳೇ ಅರೆದ ಹೂರಣವನ್ನ ಒಂದು ಸಣ್ಣ ಉಂಡೆ ಮಾಡಿ ನನ್ನ ಕೈಗೆ ಕೊಟ್ಟು ಹೆಂಗಿದೆ ಅನ್ನುವಂತೆ ನೋಡಿದಳು. ನಾನು ಬಾಯಿಗಿಟ್ಟುಕೊಂಡು ಚೆನ್ನಾಗಿದೆ ಅನ್ನುವಂತೆ ತಲೆಯಾಡಿಸಿದೆ. ಆ ಹುಡುಗಿ yay ಅಂದಳು.

    ಹಿತ್ತಲ ಕಟ್ಟೆ ಮೇಲೆ ಕೂತ್ಕೊಂಡು ನಾನು ಫೋನ್ ನೋಡ್ತಿದ್ದೆ. Roommates ಗ್ರೂಪಲ್ಲಿ ರೂಂ ಬಾಡಿಗೆಗೆ ಇಷ್ಟು, ರೇಷನ್‌ಗೆ ಇಷ್ಟು, ಕರೆಂಟ್ ಬಿಲ್‌ಗೆ ಇಷ್ಟು, ಸ್ಪಾಟಿಫೈ ಫ್ಯಾಮಿಲಿ ಸಬ್ಸ್‌ಸ್ಕ್ರಿಪ್ಷನ್‌ಗೆ ಇಷ್ಟು ಅಂತ ಲೆಕ್ಕ ಮಾಡಿ ನಿತಿನ ಹಾಕಿದ್ದ. ಹೋದ್ ತಿಂಗ್ಳು ತಾನೆ ಕೊಟ್ಟಿದೀನಿ. ಮತ್ತೆ ಬಂತಲ್ಲ ಈ ಬಾಡಿಗೆ. ಥೂ ಅವ್ನಯ್ಯನ್ ಅಂತ ಬಾಯಲ್ಲಿ ಜೋರಾಗಿ ಬಂತು.

    “What does it mean?” ಅದೇ ಹುಡುಗಿ. ಚಡ್ಡಿಗೆ ಅಂಟಿದ ಹೂರಣವನ್ನ ಒರೆಸಿಕೊಳ್ಳುತ್ತಾ ಹತ್ತಿರ ಬರುತ್ತಿದ್ದಾಳೆ. ನಾನು "ಆಂ?" ಅಂದೆ. Hi, may I know your name? ಅಂತ ಕೇಳಬೇಕಿತ್ತು. ಆದರೆ ಅಷ್ಟು ಮ್ಯಾನರ್ಸ್ ನಂಗೆಲ್ಲಿದೆ.

    “What does Thu avnayyan mean?”

    “Oh. It means something like Fuckin shit”

    “Ah. I see...” ಅವಳ ಚಡ್ಡಿ ಕೊಳೆಯಾದ ನೋಡಿಕೊಳ್ಳುತ್ತಾ “Thu avnayyan.” ಅವಳ ಜೋಕಿಗೆ ಅವಳೇ ನಕ್ಕಳು. ಅವಳು ನಕ್ಕಳು ಅಂತ ನಾನೂ ನಕ್ಕೆ. ನನ್ನ ಪಕ್ಕಕ್ಕೇ ಮೈಗೆ ಮೈ ತಾಗುವಂತೆ ಕೂತಳು. ಬಿಸಿ. ನಿಜ್ವಾಗ್ಲೂ. ಕನ್ಸಾದ್ರೂ ನಿಜ್ವಾಗ್ಲೂ ಬಿಸಿ. ಅವಳೇ ನಾನ್ ಸ್ಟಾಪ್ ಮಾತಾಡುತ್ತಾ ಹೋದಳು.

    ಅವಳು ಭಾರತಕ್ಕೆ ಬಂದಿದ್ದು ಕೆಲಸಕ್ಕೂ ಅಲ್ಲ ಪ್ರವಾಸಕ್ಕೂ ಅಲ್ಲ. ಎತ್ಲಾಗಾದ್ರೂ ಓಡೋಗ್ಬಿಡಣ ಅಂತಾರಲ್ಲ ಹಂಗ್ ಬಂದಿದ್ದಂತೆ ಇವಳು. ಮಲ್ನಾಡ್ ಕಡೆ ಎಲ್ಲೋ ಯಾರೂ ಕಾಲಿಡದ ದುರ್ಗಮ ಕಾಡಿನ ನಡುವೆ ಒಂದು ವುಡನ್ ಕ್ಯಾಬಿನ್ ತರ ಮಾಡ್ಕೊಂಡು ಜೀವ್ನ ಮಾಡ್ತಿದಾಳಂತೆ. ಕೂಗಳತೆ ದೂರದಲ್ಲೇ ಒಂದು ಹೊಳೆ ಅಂತೆ. ಅಲ್ಲೇ ಇವಳ ಸ್ನಾನ ಅಂತೆ. ಒಂಚೂರೂ ಬಟ್ಟೆ ಇಲ್ಲದೇ ಯಾರಾದ್ರೂ ನೋಡ್ತಾರೆ ಅಂತ ಭಯ ಇಲ್ಲದೇ ಹೊಳೆಯಲ್ಲಿ ಈಜಾಡೋದು ಎಷ್ಟು ಲಿಬರೇಟಿಂಗ್ ಗೊತ್ತಾ ಅಂದ್ಲು. ನಂಗೇನ್ ಗೊತ್ತು. ನಂಗೆ ಬಾತ್ರೂಮಲ್ಲಿ ಸ್ನಾನ ಮಾಡ್ತಿದ್ರು ಅಂಡರ್‌ವೇರ್ ಇರಲೇಬೇಕು. ಸರಿ ಕತೆಗೆ ಬರಣ. ಸಾರಿ ಕನಸಿಗೆ. ಅವಳ ವುಡನ್ ಕ್ಯಾಬಿನ್‌ಗೆ ಕೆಲವೊಮ್ಮೆ ಆನೆಗಳು ಬಂದು ಮೈ ತಿಕ್ಕುತ್ತವಂತೆ. ಆದ್ರೆ ಯಾವತ್ತೂ ಬೀಳಿಸುವಷ್ಟು ಜೋರಾಗಿ ತಿಕ್ಕಿಲ್ಲವಂತೆ. ಇನ್ನೊಮ್ಮೆ ಜೋರು ಬಿರುಗಾಳಿ ಬಂದು ಕಾಡಿನ ಬಾನೆತ್ತರದ ಮರಗಳೆಲ್ಲ ಉರುಳಿ ಬಿದ್ದವಂತೆ. ಕರೆಂಟ್ ಹೋಯ್ತು ಅನ್ನೋದು ಬಿಟ್ಟರೆ ಬೇರೆ ಏನೂ ಆಗ್ಲಿಲ್ಲವಂತೆ. ಕಾಡಲ್ಲಿ ಕರೆಂಟಾ? ಕನಸಲ್ಲೆಂತ ಲಾಜಿಕ್ಕು. ಒಕೆ. ಇದುವರೆಗೂ ಯಾವ ಮನುಷ್ಯರ, ನಾಗರಿಕತೆಯ ಸುಳಿವೂ ಇಲ್ಲದೇ ಎಷ್ಟು ಆರಾಮಾಗಿ ಬದುಕ್ತಿದ್ದೀನಿ ಗೊತ್ತಾ? ನೀನೂ ಬಾ. ಮಟನ್ ಬಾರ್ಬಿಕ್ಯೂ ಸಕತ್ತಾಗ್ ಮಾಡ್ತೀನಿ. ಇಷ್ಟು ವರ್ಷ ನಾನು ಯಾರ ಹತ್ರಾನೂ ಮಾತಾಡಬೇಕು ಅನ್ಸಿರ್ಲಿಲ್ಲ. ನಿನ್ನತ್ರ ಮಾತಾಡ್ತಿದ್ದೀನಿ. ಯಾರತ್ರಾನೂ ಇರಬೇಕು ಅನ್ಸಿರ್ಲಿಲ್ಲ. ಆ ಕಾಡಿನ ನಡುವೆ ಇರೋ ಕ್ಯಾಬಿನ್ನಲ್ಲಿ ನಿನ್ನ್ ಜತೆ ಇದ್ದುಬಿಡಬೇಕು ಅನ್ನಿಸ್ತಿದೆ. ಬರ್ತೀಯಾ ತಾನೇ ಅಂದಳು. ಅಷ್ಟು ಚಂದ ಹುಡುಗಿ ಅಷ್ಟು ಚಂದವಾಗಿ ಕೇಳಿದ್ರೆ ಯಾವನ್ ಇಲ್ಲ ಅಂತಾನೆ. ಬರ್ತೀನಿ ಅಂದೆ. ತುಟಿಗೆ ಮುತ್ತು ಕೊಟ್ಟೇಬಿಟ್ಟಳು. ಆ ಕಡೆ ನನ್ನ ಕಸಿನ್ಸು ಸೀರೆ ಉಟ್ಟುಕೊಂಡು ಆರತಿ ಹಿಡ್ಕೊಂಡು ಬರ್ತಿದ್ದಾರೆ. ಹಿಂದೆ ವಾಲ್ಗದವರು. ನಾಗರ ಪಂಚಮಿ ಮದ್ವೆ ಮನೆ ಆಯ್ತು ಸಟಕ್ಕಂತ. ಕನಸು ಎಷ್ಟ್ ಚಂದ. ಥೇಟ್ ಸಿನಿಮಾ ತರ. ಸಿನಿಮಾ ಎಷ್ಟ್ ಚಂದ. ಥೇಟ್ ಕನಸಿನ್ ತರ.

    ಒಟ್ನಲ್ಲಿ ಗರ್ಲ್‌ಫ್ರೆಂಡ್ ಸಿಕ್ಲು. ಅವಳ ಜತೆ ನಮ್ಮಜ್ಜಿ ಮನೆಯಲ್ಲಿರೋ ಒಂದೇ ರೂಮಲ್ಲಿ ನಾವಿಬ್ರೂ ಒಬ್ಬರ ಮೇಲೊಬ್ಬರು ಮಲ್ಕೊಂಡಿದ್ದಾಗ ಫೋನಲ್ಲಿ ಒಂದು ನ್ಯೂಸ್ ಆರ್ಟಿಕಲ್ ನೋಡ್ದೆ. ‘Netflix CEO Ted Sarandos Fired. ಹೊಸ CEO…’ ಇವ್ಳೇ. ನನ್ನ್ ಗರ್ಲ್‌ಫ್ರೆಂಡು. ಫಾರಿನ್ ಹುಡುಗಿ. ಇಲ್ಲೇ ನನ್ನ್ ಎದೆಮೇಲೆ ಮಲ್ಕೊಂಡಿದಾಳೆ. ನನ್ನ ತುಟಿಗೆ ಮುತ್ತಿಕ್ಕಿ "Are you happy for me?” ಅಂದ್ಲು. "I’m so happy. ಏನಾದ್ರೂ ಸಬ್‌ಟೈಟಲ್ ಕೆಲ್ಸ ಇದ್ರೆ ಕೊಡ್ಸು" ಅಂದೆ. ಥೂ ನನ್ನಯ್ಯನ್.

    ಹಿಂಗೇ ಹಿತ್ಲಲ್ಲಿ ನಾನೂ ನನ್ನ್ ಕಸಿನ್ಸು ಕರಿಬೇವಿನ ಮರಕ್ಕೆ ಒರಗಿಕೊಂಡು ಮಾತಾಡ್ತಿದ್ವಿ. ಎಂಥ ಹುಡುಗಿ ಪಟಾಯ್ಸ್‌‍ಬಿಟ್ಟೆ ಅಂತ ಅವ್ರು ರೇಗಿಸ್ತಿದ್ರು. ಅಷ್ಟರಲ್ಲಿ ಆ ಹುಡುಗಿ ಅಳುತ್ತಾ ಓಡಿಬಂದ್ಲು. ಕಟ್ಟೆ ಮೇಲೆ ಕೂರಿಸಿ ಏನಾಯ್ತು ಅಂತ ಕೇಳಿದಾಗ. ಯಾರೋ ಇವಳು ಹಪ್ಪಳ ಒಣ ಹಾಕಬೇಕಾದರೆ ಬಂದು ಕೈ ಹಿಡಿದುಕೊಂಡು ಎಳೆದಾಡಿದನಂತೆ. ಪಾಪ ಹುಡುಗಿ ತರತರ ನಡುಗುತ್ತಾ ಗುಬ್ಬಿಮರಿ ತರ ಕೂತು ಬಿಕ್ಕಳಿಸುತ್ತಿದ್ದಾಳೆ. ಅವಳು ಇದೇ ಕಾರಣಕ್ಕೆ ಎಲ್ಲ ಬಿಟ್ಟು ಕಾಡು ಸೇರಿಕೊಂಡಿದ್ದಂತೆ. ನನಿಗೆ ಏನು ಹೇಳುವುದೋ ತಿಳಿಯಲಿಲ್ಲ. ಸುಮ್ಮನೆ ತಲೆ ಸವರಿದೆ. "xvideos ಅಲ್ಲಿ ಎಲ್ಲ ಮಾಡ್ತೀರಾ ನಾನ್ ಕೇಳಿದ್ರೆ ಓಡೋಗ್ತೀಯ" ಅನ್ನುತ್ತಾ ಒಂದು ಆಕೃತಿ ಹಿತ್ತಲಿಗೆ ಬಂತು. ಅವನ ಮುಖ ಕಂಡವಳೇ ಹುಡುಗಿ ಹಾವು ಮೆಟ್ಟಿದಂತೆ ಕಿರುಚಿದಳು. ನಮ್ಮ ಪಕ್ಕದ ಮನೆಯವನೇ. ಕೋಪದಲ್ಲಿ ಅವನ ಬೆನ್ನಟ್ಟಿದೆ. ಅವನು ಓಡಿ ಹೋಗಿ ಮನೆ ಮುಂದೆ ನಿಂತಿದ್ದ ಮದುವೆ ಬಸ್ ಹತ್ತಿದ. ಮದುವೆ ಅಂಜಿನಪ್ಪಂದು. ಅವನಿಗೆ ಆಗಲೇ ಹೈಸ್ಕೂಲ್ ವಯಸ್ಸಿನ ಮಗ ಇದ್ದಾನೆ. ಇರಲಿ. ನಮ್ಮ ಹುಡುಗಿಯನ್ನ ಎಳೆದವನು ಬಾನೆಟ್ ಮೇಲೆ ಕೂತಿದ್ದ. ಬಸ್ಸಲ್ಲಿದ್ದ ಎಲ್ಲರೂ ಪರಿಚಯದವರೇ. ಇವನೂ ಪರಿಚಯದವನೇ. ನನಿಗೆ ಅವನನ್ನ ಏನು ಮಾಡಬೇಕೋ ತಿಳಿಯಲಿಲ್ಲ. ಮದುವೆ ಬಸ್ ಆಗಲೇ ಚೌಲ್ಟ್ರಿ ಹತ್ರ ಬಂತು. ನಾನು ಇಳಿದು ಹುಡುಗಿಯನ್ನ ಸಮಾಧಾನ ಮಾಡುವ ಕಾತರದಿಂದ ವಾಪಸ್ ಮನೆ ಕಡೆ ಹೊರಟೆ.

    ವಾಪಸ್ ಬಂದ್ರೆ ಅಜ್ಜಿ ಮನೆಯಲ್ಲಿ ಹುಡುಗಿಯೂ ಇಲ್ಲ. ನನ್ನ ಕಸಿನ್ಸೂ ಇಲ್ಲ. ನಾಗರ ಪಂಚಮಿನೂ ಅಲ್ಲ ಅವತ್ತು. ಅಜ್ಜಿ ಕರಿ ಹಿಂಡಿಯನ್ನ ಮಡಕೆಯಲ್ಲಿ ಕಲಸಿ ಬಿಸಿಲಿಗೆ ಒಣ ಹಾಕಿಕೊಂಡು ಕಟ್ಟೆ ಮೇಲೆ ಕೂತಿತ್ತು. "ಯಾವಾಗ್ ಬಂದೆ ಅಪ್ಪಾ" ಅಂತು. ಅಲ್ಲಿಗೆ ಎಚ್ಚರವಾಯ್ತು.



No comments:

Post a Comment