Thursday, 4 November 2021

ಟೂವಾದ ಥ್ರೋಟ್ ಸಿಂಗಿಂಗ್

ಮಂಗೋಲಿಯ ಅಂದ ಕೂಡ್ಲೆ ಏನ್ ತಲೆಗೆ ಬರತ್ತೆ? ಜೆಂಗಿಸ್ ಖಾನು, ಅವರ ಸಣ್ಣ ಸಣ್ಣ ಕಣ್ಣುಗಳು, ದುಂಡಗಿನ ಮುಖ, ತುದೀಲ್ ಮಾತ್ರ ನಾಕ್ ಕೂದ್ಲಿರೋ ಮೀಸೆ.. ಇದಕ್ಕೂ ಜಾಸ್ತಿ ಬಹಳ ಜನಕ್ಕೆ ಗೊತ್ತಿರಲ್ಲ. ಗೊತ್ತಿರೋದಕ್ಕೆ ಅದೇನು  ಪಕ್ಕದ ತಮಿಳ್ನಾಡಲ್ವಲ್ಲ. ನಾಕೈದು ಸಾವಿರ ಕಿಲೋಮೀಟರ್ ದೂರ ಇರೋ ದೇಶ. ಬಿಡಿ, ನಾ ಹೇಳಬೇಕಂತಿರೋದು ಈ ದೇಶದ ಬಗ್ಗೆ ಅಲ್ಲ. ಮಂಗೋಲಿಯಾಕ್ಕೆ ಅಂಟಿಕೊಂಡಿರೋ "ಟೂವಾ" ಅನ್ನುವ ರಷ್ಯಾ ದೇಶಕ್ಕೆ ಸೇರಿದ ರಾಜ್ಯದ ಬಗ್ಗೆ.

ಟೂವಾ ರಷ್ಯಾ ದೇಶಕ್ಕೆ ಸೇರಿದ್ರೂ ಊಟತಿಂಡಿ, ಬಟ್ಟೆಬರೆ, ದೇವರುದಿಂಡ್ರು, ಆಚಾರ ವಿಚಾರದಲ್ಲಿ ಮಂಗೋಲಿಯಾಕ್ಕೇ ಹೆಚ್ಚು ಹತ್ತಿರ. ಹಂಗಾಗಿ‌ ಮಂಗೋಲಿಯಾನ ಮೆನ್ಷನ್ ಮಾಡಬೇಕಾಗಿ ಬಂತು. ತೀರಾ ಮರುಭೂಮೀನೂ ಅಲ್ಲದ ಗಿಡ ಮರ ಬೆಳೆಯುವ ಫಲವತ್ತಾದ ಮಣ್ಣೂ ಅಲ್ಲದ ಈ ಸೀಮೆಗೇ ವಿಶಿಷ್ಟವಾದ ಭೂಲಕ್ಷಣ ಇಲ್ಲಿನದು. ಬರೇ ಹುಲ್ಲಿನಿಂದ ಕೂಡಿದ, ನೋಡೋ ಅಷ್ಟು ದೂರಾನೂ ಬಯಲೇ ಇರೋ ಈ ತರ ಭೂ ಪ್ರದೇಶಕ್ಕೆ ಸ್ಟೆಪ್ಪಿ ಅಂತ ಕರಿತಾರೆ. ಹಲವಾರು ಪರ್ವತ ಶ್ರೇಣಿಗಳು ಅಡ್ಡ ಇರೋದ್ರಿಂದ ಸಮುದ್ರದ ಕಡೆಯಿಂದ ಹೊರಡೋ ಮಳೆಯ ಮೋಡಗಳು ಪರ್ವತಗಳನ್ನ ದಾಟಿ ಅಲ್ಲಿವರೆಗೆ ತಲುಪೋದೇ ಇಲ್ಲ. ಹಂಗಾಗಿ ಇಲ್ಲಿ ಮಳೆ ಬೀಳೋದೆ ಇಲ್ಲ ಅನ್ನುವಷ್ಟು ಕಮ್ಮಿ. ಇಲ್ಲಿ ಮರಗಳೂ ಸೈತ ಬೆಳೆಯೋದಿಲ್ಲ. ಇಂತ ಭೂಮಿಯಲ್ಲಿ ಕೃಷಿ ಹೆಂಗೆ ಸಾಧ್ಯ. ‌ಅದಕ್ಕೇ ಇಲ್ಲಿನ ಬಹುತೇಕರು ಕುದುರೆ ಮೇಲೆ ಹತ್ತಿ ಕುರಿ ಮೇಯಿಸಿಕೊಂಡು ಆ ವಿಸ್ತಾರ ಬಯಲುಗಳಲ್ಲಿ ಓಡಾಡಿಕೊಂಡು ಜೀವನ ಕಳೆಯೋ ಅಲೆಮಾರಿಗಳು. ಇಂಥ ವಿಶಿಷ್ಟ ಜಾಗದಲ್ಲಿ ಹುಟ್ಟಿಕೊಂಡ ಒಂದು ವಿಶಿಷ್ಟ ಸಂಗೀತ ಪ್ರಕಾರಾನೇ ಥ್ರೋಟ್ ಸಿಂಗಿಂಗ್. ಬಯಲಿನಲ್ಲಿ ಶಬ್ಧ ಬಹಳ ದೂರ ಸಾಗೋದ್ರಿಂದ ಈ ಸ್ಟೆಪ್ಪಿ ಥ್ರೋಟ್ ಸಿಂಗಿಂಗ್‌ಗೆ ಹೇಳಿ ಮಾಡಿಸಿದ ಜಾಗ.

ಈ ಜನ ಒಂದು ಜಾಗದಲ್ಲಿರದ ಅಲೆಮಾರಿಗಳಾದ್ರಿಂದ ಮಾಮೂಲಿ ಜನರ ತರ ಗುಡಿಗಿಡಿ ಕಟ್ಟಿ ದೇವ್ರನ್ನ ಪೂಜೆ ಮಾಡೋಕೆ ಟೈಮೂ, ಅನುಕೂಲ ಎರಡೂ ಇರಲಿಲ್ಲ ಅನಿಸುತ್ತೆ. ಹಂಗಾಗಿ ಇವರು ಕಣ್ಣಿಗೆ ಕಾಣೋ ಪ್ರತಿಯೊಂದು ವಸ್ತುವನ್ನೂ ದೇವರು ಅಂತ ಪೂಜಿಸ್ತಿದ್ರು. ಕಲ್ಲು, ಮಣ್ಣು, ಇದ್ದಿಲು, ಬೂದಿ ಹಿಂಗೆ ಎಲ್ಲಾನು. ಈ ಕಾಲದವ್ರು ಅನಿಮಿಸಂ ಅಂತಾರಲ್ಲ ಅದು. ಅದಕ್ಕೇನೆ ಇವರ ಸಂಗೀತ ವಾಧ್ಯಗಳೆಲ್ಲ ಪ್ರಕೃತಿಯ ಬೇರೆ ಬೇರೆ ಶಬ್ಧಗಳ ಅನುಕರಣೆ ತರಾನೆ ಇರ್ತವೆ. ಥ್ರೋಟ್ ಸಿಂಗಿಂಗ್‌ ಹುಟ್ಟಿದ್ದೇ ಈ ಅನುಕರಣೆಯ ಮೂಲಕ ಅಂತ ಹೇಳ್ತಾರೆ.

ಥ್ರೋಟ್ ಸಿಂಗಿಂಗ್ ಅಂದ್ರೆ ಮೈ ಬಿಗಿ ಹಿಡಿದು ಗಂಟಲ ಆಳದಿಂದ ಗಟ್ಟಿ ಧ್ವನಿ ಹೊರಡಿಸೋದು. ನಾವು ಕೈ ಊರಿ ಮೇಲೆ ಏಳುವಾಗ್ಲೋ ಏನಾದ್ರು ಎತ್ತುವಾಗ್ಲೋ ತಿಣುಕಿದಾಗ ಹೊರಡುತ್ತಲ್ಲ ಸೌಂಡು ಸೇಮ್ ಅದೇ ತರ. ಇದರ ಇನ್ನೊಂದು ವೈಶಿಷ್ಟ್ಯತೆ ಅಂದ್ರೆ ಎರಡು ಶಬ್ಧಗಳನ್ನ ಒಟ್ಟಿಗೆ ಹೊರಡಿಸೋದು.‌ ಸಾಮಾನ್ಯ ಜನರಿಗೆ ಒಂದು ಸಲಕ್ಕೆ ಒಂದು ಶಬ್ಧ ಮಾತ್ರ ಹೊರಡಿಸೋಕೆ ಆಗೋದು. ಆದ್ರೆ ಈ ಹಾಡುಗಾರರು ಗಂಟಲಿಂದ ಬರೋ ಹಮ್ಮಿಂಗ್ ಜೊತೆಗೇನೆ ಶಿಳ್ಳೆ ಸದ್ದನ್ನೂ ಹೊರಡಿಸ್ತಾರೆ.

ಭಾಷೇನೆ ಗೊತ್ತಿರದಿದ್ರೂ ಆ ದೇಶದ ಜೊತೆಗೆ, ಆ ಹುಲ್ಲಿನ ಬಯಲಿನ ಜೊತೆಗೆ, ಅವರ ಕುದುರೆಯ ಲಾಗಾಮು ಜೊತೆಗೆ, ಗಾಳಿಗೆ ರಪರಪ ಹಾರಾಡ್ತಿರೋ ಅವರ ಜೋಪಡಿ ಜೊತೆಗೆ ಮಾತುಕತೆ ಆಡ್ತಿರೋ ತರ ಅನ್ಸತ್ತೆ ಈ ಮ್ಯೂಸಿಕ್ ಕೇಳ್ತಾ ಇದ್ರೆ. ಕೆಳಗಡೆ ಇರೋ ಲಿಂಕಲ್ಲಿ ಒಂದಷ್ಟು ಈ ಹಾಡುಗಳಿದಾವೆ. ಬಿಡುವಿದ್ರೆ ಕೇಳಿ :)

 




No comments:

Post a Comment