ಒಂದು ಸೀನ್ ನಡೀತಾ ಇದೆ ಅನ್ಕಳ್ರಿ. ಒಬ್ಬ ಹುಡುಗ ಹೊಟ್ಟೆ ಹಸಿದು ಒಂದು ಅಂಗಡೀಲಿ ಬ್ರೆಡ್ ಕದಿತಾನೆ. ಪೋಲಿಸ್ರು ಹಿಡ್ಕಂಡು ಒದಿಯಕ್ ಶುರು ಮಾಡ್ತಾರೆ. ಇದಿಷ್ಟನ್ನ ಸ್ಕ್ರೀನ್ ಮೇಲೆ ನೋಡಿ ಅಯ್ಯೋ ಪಾಪ ಹುಡುಗ ಅಂತ ನಮಿಗೆ ಅನ್ಸಕೆ ಅವ್ನು ಯಾರು, ಯಾವ ದೇಶದವ್ನು, ಯಾರ ಮಗ ಇತ್ಯಾದಿ ಯಾವ ಹಿಂದೆಮುಂದೆಗಳೂ ಬೇಕಾಗಲ್ಲ. ಆದ್ರೆ ಕೆಲವೊಂದು ಸಿನಿಮಾಗಳು ಅಥವಾ ದೃಶ್ಯಗಳು ಇರ್ತವೆ. ಅದರ ಕಾಂಟೆಕ್ಸ್ಟ್ ಗೊತ್ತಿಲ್ಲ ಅಂದ್ರೆ ಏನ್ ನಡಿತೀದೆ ಹೆಂಗೆ ರಿಯಾಕ್ಟ್ ಮಾಡಬೇಕು ಅಂತ ಗೊತ್ತೇ ಆಗಲ್ಲ. ಥಿಯೇಟರಲ್ಲಿ ಡನ್ಕರ್ಕ್ ನೋಡಕ್ ಹೋದಾಗ ಹಿಂಗೇ ಆಗಿತ್ತು. ಕೆಳಗಡೆ ಬೀಚ್ ಗುಂಟ ಸೈನಿಕರು ಸಾಲುಗಟ್ಟಿ ನಿಂತಿದಾರೆ. ಮೇಲ್ಗಡೆಯಿಂದ ವಿಮಾನಗಳು ಅವರ ಮೇಲೆ ಬಾಂಬ್ ಸುರಿತಿದಾರೆ. ಆದ್ರೆ ಥಿಯೇಟರಲ್ಲಿದ್ದ ಮುಕ್ಕಾಲು ಜನಕ್ಕೆ ಬ್ರಿಟಿಷವ್ರು ಎಸ್ಕೇಪ್ ಆಗಕೆ ಟ್ರೈ ಮಾಡ್ತಿದಾರೆ ಯಾವ್ದೋ ದೇಶದವ್ರು (ಸಿನಿಮಾದಲ್ಲಿ ಎಲ್ಲೂ "ಜರ್ಮನ್" ಪದ ಬಳಸಿಲ್ಲ. ಬರೀ "ಶತ್ರು" ಅಂತ ಮಾತ್ರ ಹೇಳ್ತಾರೆ) ಅವ್ರನ್ನ ಸಾಯ್ಸಕ್ ಟ್ರೈ ಮಾಡ್ತಿದಾರೆ ಅಂತ ಬಿಟ್ರೆ ಏನ್ ನಡೀತಿದೆ ಅಂತಾನೆ ಗೊತ್ತಿರಲಿಲ್ಲ. ಶಾಪಿಂಗ್‌ಗೆ ಅಂತ ಮಾಲಿಗೆ ಬಂದವ್ರು ಹಂಗೇ ಟಿಕೆಟ್ ತಗೊಂಡ್ ಬಂದು ಕುಂತಿರಬೇಕು.
ನೀವು ಡನ್ಕರ್ಕ್ ನೋಡಿದ್ರೆ ನಿಮಿಗೆ ಅದರ ಕಾಂಟೆಕ್ಸ್ಟ್ Obvious ಅನ್ಸಿರತ್ತೆ. ಆದ್ರೆ ಡನ್ಕರ್ಕ್ ಅರ್ಥ ಆಗಕೆ ಎಷ್ಟೊಂದ್ ವಿಷಯ ಗೊತ್ತಿರಬೇಕು ಸುಮ್ನೆ ಯೋಚ್ನೆ ಮಾಡ್ರಿ. ಮೊದಲಿಗೆ ಕೆಳಗಡೆ ನಿಂತಿರೋ ಬ್ರಿಟಿಷವರ ಮೇಲೆ ವಿಮಾನದಲ್ಲಿ ಬಾಂಬ್ ಉದುರುಸ್ತಿರೋವ್ರು ಜರ್ಮನಿಯವ್ರು ಅಂತ ಗೊತ್ತಿರಬೇಕು. ಅದಕ್ಕೂ ಮೊದ್ಲು ಜರ್ಮನಿ ಮತ್ತೆ ಬ್ರಿಟನ್ ನಡುವೆ ಯುದ್ಧ ನಡೀತಿತ್ತು ಅಂತ ಗೊತ್ತಿರಬೇಕು. ಆ ಯುದ್ಧದಲ್ಲಿ ಫ್ರಾನ್ಸ್ ಮತ್ತೆ ಇಂಗ್ಲೆಂಡ್ ಒಂದಾಗಿ ಜರ್ಮನಿ ಮೇಲೆ ಹೋರಾಡ್ತಿದ್ವು ಅಂತ ಗೊತ್ತಿರಬೇಕು. ಜರ್ಮನಿ ಶತ್ರು ಸೈನ್ಯನ ಧ್ವಂಸ ಮಾಡ್ತಾ ಫ್ರಾನ್ಸ್‌ನ ಆಕ್ರಮಿಸಿಕೊಳ್ತಾ ಬಂದು ಬ್ರಿಟಿಷ್ ಮತ್ತೆ ಫ್ರೆಂಚರನ್ನ ಸಮುದ್ರದ ದಡದ ತನಕ ಅಟ್ಟಿಕೊಂಡು ಬಂದಿದ್ರು ಅಂತ ಗೊತ್ತಿರಬೇಕು. ಉಳಿದ ಬ್ರಿಟಿಷ್ ಮತ್ತು ಫ್ರೆಂಚರು ಸಮುದ್ರ ದಾಟಿ ಬ್ರಿಟನ್ ಸೇರಿಕೊಳ್ಳಲು ಹವಣಿಸುತ್ತಿದ್ದಾರೆ ಅಂತ ಗೊತ್ತಿರಬೇಕು. ಇದೆಲ್ಲದಕ್ಕಿಂತ ಮುಖ್ಯವಾಗಿ ಬ್ರಿಟನ್ ಯೂರೋಪಿಂದ ಬೇರೆಯಾಗಿ ಸಮುದ್ರದಿಂದ ಸುತ್ತುವರೆದಿರೋ ಒಂದು ದ್ವೀಪ ದೇಶ ಅಂತ ಗೊತ್ತಿರಬೇಕು. ಜರ್ಮನಿಯವರ ಯದ್ಧ ಟ್ಯಾಂಕುಗಳು ಬ್ರಿಟಿಷರನ್ನ ಬೆನ್ನತ್ತಿಕೊಂಡು ಸಮುದ್ರದಲ್ಲಿ ಹೋಗಕಾಗಲ್ವಲ್ಲ. ಇವಾಗ ಹೆಂಗೋ ಬ್ರಿಟನ್ ಸೇರಿಕೊಂಡು ಬಿಟ್ರೆ ಸದ್ಯಕ್ಕೆ ನಿರಾಳ.
ಇದಿಷ್ಟೂ ಬೇಸಿಕ್ ಕತೆ ಗೊತ್ತಾಗೋದಕ್ಕೆ ಸಾಕು. ಆದ್ರೆ ಸಿನಿಮಾ ಬೀರುವ ಪರಿಣಾಮ ನಾವು ಯಾರು ಅನ್ನೋದ್ರ ಮೇಲೂ ನಿಂತಿರತ್ತೆ. ಇಡೀ ಬ್ರಿಟಿಷ್ ಸೈನ್ಯ ಜರ್ಮನಿ ಕೈಯಲ್ಲಿ ಸಿಕ್ಕಿಬಿದ್ದು ಪ್ರಾಣ ಉಳಿಸಿಕೊಳ್ಳಲು ತವರಿಗೆ ಓಡಿ ಬರಕೆ ತವಕಿಸ್ತಿರುವಾಗ ಸಣ್ಣಪುಟ್ಟ ಮೀನು ಹಿಡಿಯೋ ದೋಣಿಯವರೂ ಕೂಡ ಎಷ್ಟಾಗತ್ತೋ ಅಷ್ಟು ಸೈನಿಕರನ್ನ ತಾಯ್ನಾಡಿಗೆ ಕರ್ಕೊಂಡ್ ಬರನ ಅಂತ ಯುದ್ಧ ನಡೀತಿರೋ ಜಾಗಕ್ಕೆ ನುಗ್ತಾರೆ ಅಂದ್ರೆ ಅದು ಒಬ್ಬ ಬ್ರಿಟಿಷ್ ಪ್ರಜೆಯ ಎದೆ ಒಳಗೆ ಉಕ್ಕಿಸೋ ರೋಮಾಂಚನವನ್ನ ಬೇರೆ ದೇಶದವ್ರು ಅನುಭವಿಸೋದಕ್ಕೆ ಸಾಧ್ಯ ಇಲ್ಲ.
ಮುನ್ನೂರೈವತ್ತು ಸಾವಿರ ಜನ ಶತ್ರು ಸೈನಿಕರು ಒಂದು ಬೀಚ್ ಹತ್ರ ನಿಂತಿದಾರೆ ಅಂದ್ರೆ ಬಂದು ಟ್ಯಾಂಕು, ಗನ್ನಿಂದ ಪುಡಿಪುಡಿ ಮಾಡೋದು ಬಿಟ್ಟು ಜರ್ಮನ್ನರು ಯಾಕೆ ಬರೀ ವಿಮಾನದಲ್ಲಿ ಬಾಂಬ್ ಉದುರಿಸ್ತಿದಾರೆ ಅನ್ನೋ ಪ್ರಶ್ನೆ ಬಂದೇ ಬರತ್ತೆ. ಇಡೀ ಯೂರೋಪನ್ನ ಆರು ವಾರದಲ್ಲಿ ಗೆದ್ದ ಜರ್ಮನ್ನರಿಗೆ ಬೋನಿಗೆ ಬಿದ್ದಿದ್ದ ಮುನ್ನೂರು ಸಾವಿರ ಸೈನಿಕರನ್ನ ಹಿಡಿಯೋದೇನೂ ಕಷ್ಟ ಆಗ್ತಿರಲಿಲ್ಲ. ಆದರೂ ಜರ್ಮನ್ ಸೇನೆ ಯಾಕೆ ಮುಂದುವರೆಯಲಿಲ್ಲಿ ಅಂದ್ರೆ ಜರ್ಮನ್ ಏರ್‌ಫೋರ್ಸ್‌ನ ಕಮಾಂಡರ್ ಇನ್ ಚೀಫ್ ಆಗಿದ್ದವನು ಹರ್ಮನ್ ಗೋರಿಂಗ್. ಇವನೆಂತ ಮುಟ್ಟಾಳ ಹಾಗೂ ಸೊಕ್ಕಿನ ವ್ಯಕ್ತಿ ಅಂದ್ರೆ ಎರಡನೇ ಮಹಾಯುದ್ಧದ ಕೊನೆಯ ದಿನಗಳಲ್ಲಿ ಹಿಟ್ಲರ್ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸುತ್ತಿದ್ದಾಗ ನೀವು ಸಾಯೋದು ಸಾಯ್ತೀರ ಸತ್ತಮೇಲೆ ತಾನು ಜರ್ಮನಿಯ ಲೀಡರ್ ಆಗುವಂತೆ ಬರೆದಿಟ್ಟು ಸಾಯಿರಿ ಅಂತ ಹಿಟ್ಲರ್‌ಗೆ ಟೆಲಿಗ್ರಾಂ ಕಳಿಸಿರುತ್ತಾನೆ. ಇದರಿಂದ ಉರಿದುಬಿದ್ದ ಹಿಟ್ಲರ್ ಅವನನ್ನ ಎಲ್ಲ ಪದವಿಗಳಿಂದ ಕೆಳಗಿಳಸಿ ದೇಶದ್ರೋಹಿ ಅಂತ ಪರಿಗಣಿಸಿ ಅವನನ್ನ ಅರೆಸ್ಟ್ ಮಾಡುವಂತೆ ಆದೇಶಿಸುತ್ತಾನೆ. ಇಂತಾ ಮಂಗ್ತುಲ್ಲು ಗೋರಿಂಗ್ ಸುಮ್ನೆ ಸೈನಿಕರಿಗೆ ಯಾಕೆ ಕಷ್ಟ ಕೊಡೋದು ನನ್ನ ವಿಮಾನಗಳೇ ಸಾಕು ಬ್ರಿಟಿಷರನ್ನ ಧೂಳಿಪಟ ಮಾಡೋದಕ್ಕೆ ಅಂತ ಹಿಟ್ಲರಿಗೆ ಪುಂಗ್ತಾನೆ. ಈ ಮುಟ್ಟಾಳನ ಮಾತು ಕಟ್ಟಿಕೊಂಡು ಹಿಟ್ಲರ್ ತನ್ನ ಸೈನ್ಯಕ್ಕೆ ನೀವು ರೆಸ್ಟ್ ತಗೊಳಿ ಅಂದುಬಿಡ್ತಾನೆ. ಈ ಒಂದು ತಪ್ಪಿನಿಂದ ಮುಂದೆ ಎರಡನೇ ಮಹಾಯುದ್ಧದ ದಿಕ್ಕೇ ಬದಲಾಗತ್ತೆ.
ಇದರ ಜೊತೆಗೆ ಸಿನಿಮಾನ ಪೂರ್ತಿ ಅಪ್ರಿಷಿಯೇಟ್ ಮಾಡಕೆ ಅದ್ರಲ್ಲಿ ಬರೋ ಡೀಟೇಲ್ಸ್‌ಗಳೂ ಗೊತ್ತಿರೋದು ಅಷ್ಟೇ ಇಂಪಾರ್ಟೆಂಟ್. ತನ್ನ ಮಗನೊಂದಿಗೆ ಸೈನಿಕರನ್ನ ಕಾಪಾಡಲು ಮುದುಕನೊಬ್ಬ ತನ್ನ ಸಣ್ಣ ಬೋಟಿನಲ್ಲಿ ಹೋಗ್ತಿರ್ತಾನೆ. ಹಿಂದುಗಡೆಯಿಂದ ವಿಮಾನಗಳು ಬರುತ್ತಿರೋ ಶಬ್ಧ ಕೇಳಿ ಹುಡುಗ ಆತಂಕದಿಂದ ನೋಡಿದಾಗ ಮುದುಕ ಅವು ನಮ್ಮವೇ "Spitfires. Greatest plane ever built" ಅಂತಾನೆ. ಅದೆಂಗ್ ಹೇಳಿದ್ರಿ ನೀವು ನೋಡ್ದಲೇ ಅಂತ ಹುಡುಗ ಕೇಳ್ದಾಗ "Rolls Royce Merlin engine. Sweetest sound you can hear out here" ಅಂತಾನೆ.
ಇದರ ಕಾಂಟೆಕ್ಸ್ಟ್ ಗೊತ್ತಿಲ್ಲದವರಿಗೆ ಸಿನಿಮಾದಲ್ಲಿ ಇದೊಂದು ಡೈಲಾಗ್ ತರ ಅಷ್ಟೇ ಪಾಸ್ ಆಗಿರತ್ತೆ. ಆದರೆ ಕಾಂಟೆಕ್ಸ್ಟ್ ಗೊತ್ತಿದ್ದವರಿಗೆ ಇದರ ಪ್ರಾಮುಖ್ಯತೆ ತಿಳಿಯತ್ತೆ. ಇಡೀ ಎರಡನೇ ಮಹಾಯುದ್ಧದ ಗತಿಯನ್ನ ಬದಲಿಸಿದ್ದು ಎರಡೂ ಬಣಗಳ ಹತ್ತಿರವಿದ್ದ ಟೆಕ್ನಾಲಜಿ. ಆದ್ದರಿಂದಲೇ ಒಬ್ಬರ ಟೆಕ್ನಾಲಜಿ ಇನ್ನೊಬ್ಬರು ಕದಿಯೋದಕ್ಕಂತಲೇ ಗೂಡಾಚಾರರ ಪಡೆಗಳೇ ಇದ್ವು. ವಿಮಾನಗಳು ಶತ್ರು ದೇಶದೊಳಕ್ಕೆ ಬಿದ್ದಾಗ ಪೈಲಟ್‌ಗಳು ಆ ಟೆಕ್ನಾಲಜಿ ಶತ್ರುಗಳಿಗೆ ಗೊತ್ತಾಗಬಾರದು ಅಂತ ಅವನ್ನ ಸುಟ್ಟು ಹಾಕುತ್ತಿದ್ರು. ಇದಕ್ಕೆ ಒಳ್ಳೇ ಉದಾಹರಣೆಗೆ ಅಂದ್ರೆ ಜರ್ಮನ್ನರ ಹತ್ತಿರವಿದ್ದ Messerschmitt bf 109 ವಿಮಾನ. ಇದು ಎಷ್ಟು ಪರಿಣಾಮಕಾರಿಯಾಗಿತ್ತು ಅಂದ್ರೆ ಇವತ್ತಿಗೂ ಅತಿ ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿಸಿದ ಫೈಟರ್ ವಿಮಾನ ಅಂದ್ರೆ ಇದೇ. ಜರ್ಮನ್ನರಿಗೆ ಮೊದಲು ಬಲಿಯಾದ ಪೋಲೆಂಡ್ ಸೋಲಿಗೂ ನಂತರ ಶರಣಾದ ಇತರ ಯೂರೋಪಿಯನ್ ದೇಶಗಳ ಸೋಲಿಗೂ ಇದರ ಕೊಡುಗೆ ಹೆವಿ. ಇಂತಾ ಬಲಶಾಲಿ ವಿಮಾನವನ್ನ ಎದುರಿಸೋದಕ್ಕೆ ಬ್ರಿಟಿಷರಿಗೆ ಅದಕ್ಕೆ ಸರಿಸಮವಾದ ಒಂದು ವಿಮಾನ ಬೇಕಿತ್ತು. ಅದೇ Spitfire. ಎಲ್ಲಾ ದೃಷ್ಟಿಯಿಂದ್ಲೂ Messerschmittಗಿಂತ ಒಂದು ಹೆಜ್ಜೆ ಮುಂದೇನೆ ಇದ್ದ ಇದಕ್ಕೆ ಶಕ್ತಿ ತುಂಬುತ್ತಿದ್ದಿದ್ದು ಅವತ್ತಿನ ಕಾಲಕ್ಕೆ ಅತ್ಯಾಧುನಿಕವಾಗಿದ್ದ ರೋಲ್ಸ್ ರಾಯ್ಸ್ ಮರ್ಲಿನ್ ಇಂಜಿನ್. ಪ್ರತಿಯೊಬ್ಬ ಬ್ರಿಟಿಷನಿಗೂ ಇದನ್ನ ಕಂಡರೆ ಹೆಮ್ಮೆ. ಯುದ್ಧಭೂಮಿಯಲ್ಲಿ ಅಸಹಾಯಕರಾಗಿ ಸಿಕ್ಕಿಬಿದ್ದ ಬ್ರಿಟಿಷ್ ಪ್ರಜೆಯೊಬ್ಬನಿಗೆ ಈ ರೋಲ್ಸ್ ರಾಯ್ಸ್ ಮರ್ಲಿನ್ ಇಂಜಿನ್ನಿನ ಶಬ್ಧ ಕೊಡಬಹುದಾದ ಧೈರ್ಯವನ್ನ ಇದರ ಹಿನ್ನೆಲೆ ಗೊತ್ತಿಲ್ಲದೇ ಹೆಂಗೆ ಊಹಿಸೋಕಾಗತ್ತೆ ಹೇಳ್ರಿ..
U-boatನಿಂದ ಹಿಡಿದು ಏರ್‌ಫೋರ್ಸಲ್ಲಿದ್ದ ತನ್ನ ಮಗನಿಂದ ಕಲಿತ ವಿಮಾನದ ದಿಕ್ಕುತಪ್ಪಿಸುವ ಚಾಲಾಕುಗಳಂತ ಹಲವಾರು "ಕಾಂಟೆಕ್ಸ್ಟ್"ಗಳು ಡನ್ಕರ್ಕ್ ಸಿನಿಮಾದಲ್ಲಿವೆ. ಇವೆಲ್ಲ ಗೊತ್ತಿಲ್ಲ ಅಂದ್ರೂ ಸಿನಿಮಾ ನೋಡಬಹುದು. ಆದರೆ ಕಾಂಟೆಕ್ಸ್ಟ್ ಗೊತ್ತಿದ್ದರೆ ಸಿನಿಮಾದ " ಯುನಿವರ್ಸ್" ನಮಿಗೆ ಹೆಚ್ಚು ರಿಯಲ್ ಆಗ್ತಾ ಹೋಗತ್ತೆ. ಸಿನಿಮಾ ನಮ್ಮನ್ನ ಒಳಗೆ ಎಳಕೊಳ್ಳುತ್ತಾ ಹೋಗತ್ತೆ. ಇಲ್ಲಾ ಅಂದ್ರೆ We will just be spectators, not participants. ಇವಾಗ ಅನಿಸ್ತೈತೆ ಇಷ್ಟು ದಿನ ಬೋರಿಂಗ್ ಅನಿಸಿದ, ಅರ್ಧಕ್ಕೆ ಬಿಟ್ಟ ಸಿನಿಮಾಗಳು ಬೋರಿಂಗ್ ಅನಿಸಿದ್ದಕ್ಕೆ ಅದರ ಕಾಂಟೆಕ್ಸ್ಟ್ ಗೊತ್ತಿಲ್ಲದಿದ್ದಿದ್ದೂ ಕಾರಣ ಇರಬಹುದು ಅಂತ. ಮೊದಲ ಸಲ ಸಾಧಾರಣ ಅನಿಸಿದ್ದ ಡನ್ಕರ್ಕ್ ಇವಾಗ ಮಾಸ್ಟರ್‌ಪೀಸ್ ಅನಿಸೋಕೆ ಶುರುವಾಗೇತೆ.