Friday, 14 February 2020

ಐದು ಕೋಣ, ಒಂದೇ ಬಲಿ

ಕಿರಣ ಹೇಳಿದ್ದು ನಾಕು ಗಂಟೆಗೆ. ಆದರೆ ನಾನು ಮೂರುವರೆಗೇ ಅಲಾರಂ ಇಟ್ಟಿದ್ದೆ, ಯಾವುದಕ್ಕೂ ಇರಲಿ ಅಂತ. ಆದ್ರೆ ಆ ಚಳೀಲಿ ಎದ್ದು ಫೋನ್ ಮಾಡಿದರೆ "ಆಗ್ಲೇ ಕಡುದ್ರು ಕಣ, ಮಕ್ಕ ಇನ್ನೇನ್ ಬರ್ತೀಯ" ಅಂದ. ಥೂ ಇವ್ನೌನ್!

ಅಲ್ಲ, ಹನ್ನೆರಡು ವರ್ಷದ ಮೇಲೆ ಊರಲ್ಲಿ ಮಾರಿ ಹಬ್ಬ ಆಗ್ತೈತೆ. ಈ ಸಲ ತಲೆ ಮೇಲೆ ತಲೆ ಹೋಗಲಿ ಕೋಣ ಕಡಿಯದನ್ನ ನೋಡಲೇ ಬೇಕಂತ ಮಾಡಿದ್ದೆ ನಾನು. ಕುರಿ ಕಡಿಯದು ಬೇಕಾದರೆ ಬೇಕಾದಷ್ಟು ಸಲ ನೋಡಿದೀನಿ. ಕುರಿಗಳನ್ನೇ ಒಂದೇ ಏಟಿಗೆ ಗೋಣು ಕತ್ತರಿಸಿ ಬೀಳೋ ತರ ಕಡಿಯೋದು ಕಷ್ಟ. ಅಂತದರಲ್ಲಿ ಅಂತ ಕೋಣದ ತರ ಇರೋ ಕೋಣಾನ ಹೆಂಗೆ ಕಡಿತಾರೆ ಅಂತ ನನಿಗೆ ಭಾರೀ ಕುತೂಹಲ ಇತ್ತು. ಹೋದ ಸರತಿ ಊರಲ್ಲಿ ಹಬ್ಬ ಆದಾಗ ನಾನಿನ್ನು ಏಳ‌ನೇ ಕ್ಲಾಸು. ಚಿಕ್ಕ ಹುಡುಗರು ಅಂತ ಮನೇಲಿ ಬಿಟ್ಟಿರಲಿಲ್ಲವೋ ಇಲ್ಲಾ ಅವಾಗಿನ್ನು ನನಿಗೆ ಇಂತ ವಿಕೃತ ತೀಟೆಗಳು ಶುರುವಾಗಿರಲಿಲ್ಲವೋ ಗೊತ್ತಿಲ್ಲ. ಒಟ್ಟಿನಲ್ಲಿ ನೋಡೋದಕ್ಕಾಗಿರಲಿಲ್ಲ.

ಅದಕ್ಕೂ ಮುಂಚೆ ಅಂದರೆ ನಾನಿನ್ನ ಮೂರೋ ನಾಕೋ ವರ್ಷದವನಿದ್ದಾಗ ಒಂದು ಸಲ ಮಾರಿ ಹಬ್ಬ ಆಗಿತ್ತು. ಅವಾಗಿನ್ನು ನನಿಗೆ ಮಾರಿಹಬ್ಬದಲ್ಲಿ ಕೋಣ ಕಡೀತಾರೆ ಅನ್ನೋದೇ ಗೊತ್ತಿರಲಿಲ್ಲ. ಹನುಮಂತ ದೇವರ ಗುಡಿ ಮುಂದೆ ಜಾತ್ರೇಲಿ ಗುಳ್ಳೆ ಬಿಡೋ ಆಟದ ಸಾಮಾನು ತಗೊಂಡಿದ್ದಷ್ಟೇ ನೆನಪಿರೋದು. ಅದರ ಜೊತೆ ಅವತ್ತು ನಂಗೊಂದು ಎರಡು ರುಪಾಯಿ ಕಾಯಿನ್ ಕೂಡ ಸಿಕ್ಕಿತ್ತು. ಅದಕ್ಕೂ ಹಿಂದಿನ ಹಬ್ಬದಲ್ಲಿ ನಾನು ಹುಟ್ಟೇ ಇರಲಿಲ್ಲ. ಅಲ್ಲಿಗೆ ಇದು ನನ್ನ ಜೀವಮಾನದ ಮೂರನೇ ಮಾರಿಹಬ್ಬ. ನಮ್ಮ ಹುಡುಗರಿಗೆಲ್ಲ ಜಾಸ್ತಿ ಕುಡಿಯೋಕೆ ಇದೇ ಕಾರಣ ಸಾಕಾಗಿತ್ತು. "ಮುಂದಿನ ಸರತಿಗೆ ಇರನ್ಯಾವನೋ ಸಾಯನ್ಯಾವನೋ ಕುಡಿಯಾ ಅವ್ನೌನ್" ಅಂತ. 

ಸಾಮಾನ್ಯವಾಗಿ ಮಾರಿಹಬ್ಬಗಳನ್ನ ಪ್ರತಿವರ್ಷ ಮಾಡಲ್ಲ. ಕೆಲವೊಂದೂರಲ್ಲಿ ಮೂರು ವರ್ಷಕ್ಕೊಮ್ಮೆ. ಕೆಲವೊಂದೂರಲ್ಲಿ ಐದು ವರ್ಷಕ್ಕೊಮ್ಮೆ. ಹಿಂಗೆ, ಅಂತರ ಇದ್ದೇ ಇರತ್ತೆ. ಇದು ಸೋವಿ ಹಬ್ಬ ಅಲ್ವಲ್ಲ, ಖರ್ಚು ಜಾಸ್ತಿ. ಆದರೆ ಮಾಯಕೊಂಡಕ್ಕೆ ಬಂದು ನಿಮ್ಮೂರಲ್ಲಿ ಎಷ್ಟೊರ್ಷಕ್ಕೊಮ್ಮೆ ಅಂದ್ರೆ ಯಾವನೂ ಒಂದು ನಿರ್ದಿಷ್ಟ ಉತ್ತರ ಕೊಡಲ್ಲ. ನಿರ್ದಿಷ್ಟ ಉತ್ತರ ಇದ್ರೇ ತಾನೆ? ಯಾರೋ ಹಳಬರನ್ನ ಕೇಳಿದರೆ ಒಬ್ಬರು ಏಳು ವರ್ಷಕ್ಕೊಮ್ಮೆ ಅಂತಾರೆ. ಇನ್ನೊಬ್ಬರು ಒಂಬತ್ತು ವರ್ಷಕ್ಕೊಮ್ಮೆ ಅಂತಾರೆ.

ಅದೇನೇ ಇರಲಿ, ಆದರೆ ಹನ್ನೆರಡು ವರ್ಷ ಅಂದರೆ ತೀರಾ ಅತೀ ಆಯಿತು. ಇದಕ್ಕೆ ಬೇರೆ ಊರವರು "ಮಾಯಕೊಂಡದವರು ಜುಗ್ಗ ಸೂಳೆಮಕ್ಕಳು, ಬ್ಯಾರೆ ಊರಿಗೆ ಬಂದು ತಿನ್ನಕಷ್ಟೇ ಲಾಯಕ್ಕು." "ಊರು ದೊಡ್ಡದಾದರೇನು ಬಂತು? ನರ ಇರಬೇಕು ಅವನ್ನೆಲ್ಲ ಮಾಡಕೆ" ಅಂತ ಕಾರಣಗಳನ್ನು ಕೊಡಬಹುದು. ಆದರೆ ಇದಕ್ಕೆ ನಮ್ಮವರ ಅಧಿಕೃತ ಕಾರಣ ( ಇದನ್ನ ಬ್ಯಾರೆ ಊರವರು "ನೆವ" ಅಂತಾರೆ. ಇರಲಿ) "ಹನುಮಂತ ದೇವರ ಗುಡಿ ಕಟ್ಟದು ಮುಗಿದಿಲ್ಲ. ದೇವರನ್ನ ಬೀದೀಲಿಟ್ಟು ಹಬ್ಬ ಮಾಡಬಾರದು" ಅಂತ.

ನಮ್ಮೂರಿನ ಆಂಜನೇಯ ಸ್ವಾಮಿ ದೇವಸ್ಥಾನ ಅಂದ್ರೆ ಫುಲ್ ಫೇಮಸ್ಸು. (ಆಗಿತ್ತು.) ಅಥವಾ ನಾನು ಹಂಗಂದುಕೊಂಡಿದೀನಿ. ಚೌಕಭಾರ ಆಡೋ ಮುದುಕರಿಗೆ, ನವಗ್ರಹಗಳ ಸುತ್ತ ಐಸ್‌ಪೈಸ್ ಆಡೋ ಹುಡುಗರಿಗೆ, ಮಾಡಕೆ ಕೆಲ್ಸ ಇಲ್ದೇ ಬಂದು ನಿದ್ದೆ ಹೊಡೆಯೋರಿಗೆ ಒಳ್ಳೇ ಜಾಗ. ಇಂತವು ನಮ್ಮೂರಲ್ಲಿ ಭಾಳ ಅದಾವೆ. ಯಾಕಂದ್ರೆ ದೊಡ್ಡು ಊರು ನೋಡಿ. ಆದ್ರೆ ಅವುಕ್ಕೆಲ್ಲ ಇದೊಂತರ ಹೆಡ್ ಕ್ವಾರ್ಟರ್ಸ್. ಬರೇ ಇದುನ್ನೇ ಹೇಳು ಅದುಕ್ಕೊಂದು ಐತಿಹಾಸಿಕ ಹಿನ್ನೆಲೆನೂ ಐತೆ ಅಂತ ನಮ್ಮೂರಿನವರು ಯಾರಾದರೂ ಓದ್ತಾ ಇದ್ರೆ ಬೈಕೋಬಹುದು. ಹೌದೌದು, ಇಲ್ಲೊಂದು ಮದಕರಿ ನಾಯಕ ಕೊಟ್ಟಿರೋ ಒಂದು ಘಂಟೆ ಬೇರೆ ಐತೆ. ಅದರ ಮೇಲೆ ಏನೋ ಬರೆದಿದಾರಂತಪ್ಪ. ನನಿಗ್ಗೊತ್ತಿಲ್ಲ.

ದುರ್ಗದ ನಾಯಕರ ಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರ ಬೇರೆ ಆಗಿತ್ತಂತೆ ನಮ್ಮೂರು. ದುರ್ಗದ ಪಾಳೆಯದ ಉತ್ತರ ಗಡಿಠಾಣೆ ಅಂತೆಲ್ಲ ಹೇಳ್ತಾರೆ. ಇದ್ರೂ ಇರಬಹುದು. ನಮ್ಮೂರಿಗೆ ಅಂಟಿಕೊಂಡಂಗೇ ಮಾಗಡಿ ಅನ್ನೋ ಹೆಸರಿನ ಊರು ಬೇರೆ ಐತೆ. ಮುದ್ರಿತ ಇತಿಹಾಸ ಏನೇ ಇದ್ದರೂ "ಮದಕರಿ ನಾಯಕ ಮಾಯಕೊಂಡದಲ್ಲಿ ಸೂಳೆ ಒಬ್ಬಳನ್ನ ಇಟ್ಟುಕೊಂಡಿದ್ದನಂತೆ." "ಮೊಲ ಬೇಟೆಯಾಡಲು ಆಗಾಗ ಇಲ್ಲಿಗೆ ಬರುತ್ತಿದ್ದನಂತೆ" ಅನ್ನೋ ಕತೆಗಳಷ್ಟೇ ನಮ್ಮಗಳ ಬಾಯಲ್ಲಿರೋದು. 

ಇಂತ ಘನಂದಾರಿ ಗುಡಿಯನ್ನ ಆರೇಳು ವರ್ಷದ ಕೆಳಗೆ ಕೆಡವಿದರು. ಹೊಸದಾಗಿ ಕಟ್ಟಿಸೋದಕ್ಕೆ. ಚೆನ್ನಾಗೇ ಇತ್ತಪ್ಪ ನನ್ನ ಕೇಳಿದರೆ. ಮೇಲ್ಛಾವಣಿಯಿಂದ ಕಬ್ಬಿಣದ ಸರಳುಗಳು ಕಾಣ್ತಿದ್ದವು, ಅವಾಗವಾಗ ಸಿಮೆಂಟಿನ ಚಕ್ಕಳಗಳು ಉದುರುತ್ತಿದ್ದವು ಅನ್ನೋದನ್ನ ಬಿಟ್ಟರೆ. ಆದರೆ ಇತ್ತೀಚೆಗೆ ಗುಡಿಗೆ ಬರೋ ಜನಗಳ ಸಂಖ್ಯೆ ಕಮ್ಮಿ ಆಗಿತ್ತು. ಅಥವಾ ನಾನು ಹೋಗೋದು ಬಿಟ್ಟೇ ಎಷ್ಟೋ ವರ್ಷ ಆಗಿರೋದ್ರಿಂದ ನನಿಗೆ ಹಂಗನಿಸುತ್ತಿರಬಹುದು. ನಾನು ಸಣ್ಣವನಿದ್ದಾಗ ಶನಿವಾರ ಬಂತಂದರೆ ಹೆಂಗಸರಿಗೆಲ್ಲ ಸಡಗರ. ಸಂಜೆಹೊತ್ತು ಜನಜಾತ್ರೆ ಗುಡಿ ಮುಂದೆ.

ಇರಲಿ. ಅಂತೂ ನಮ್ಮೂರಿ‌ನ ಹಿರಿತಲೆಗಳಿಗೆ ಏನೋ ಚಟ ಹತ್ತಿ ಗುಡಿ ಕೆಡವಿದ್ರು. ದೇವ್ರನ್ನ ಮಳೆ-ಗಾಳೀಲಿ ನಿಲ್ಲಿಸಿದ್ದರಿಂದ ಹನುಮಪ್ಪನ ಕಣ್ಣಲ್ಲಿ ನೀರು ಸುರಿಯುತ್ತಿದೆ ಅಂತ ಟೀವಿಲೆಲ್ಲ ಸುದ್ದಿಯಾಗಿದ್ದನ್ನ ನೀವು ನೋಡಿರಬಹುದು. ಅದೇನು ಬಿಸಿಲಲ್ಲಿ ನಿಲ್ಲಿಸಿದ್ದರಿಂದ ಇಷ್ಟು ದಿನ ಹೆಪ್ಪುಗಟ್ಟಿದ್ದ ಜಿಬಿ(ಜಿಡ್ಡು) ಕರಗಿ ಕೆಳಗಿಳಿಯುತ್ತಿತ್ತೋ ಇಲ್ಲಾ ಹನುಮಪ್ಪ ತನಗೊದಗಿದ ದುಸ್ಥಿತಿಗೆ ನಿಜವಾಗಲೂ ಕಣ್ಣೀರು ಹಾಕುತ್ತಿದ್ದನೋ ಗೊತ್ತಿಲ್ಲ. ಇಂತ ಅವಮಾನದ ವಿಷಯಕ್ಕೂ ನಮ್ಮೂರು ಟೀವೀಲಿ ಬಂತು ಅಂತ ಸಂಭ್ರಮದಿಂದ ಹಿಗ್ಗಿದ್ರು ಜನ. ಥೋ ಅಂತೇಳಿ ಒಂದೆರಡು ತಲೆಮಾಸಿದವರು ಬುದ್ಧಿ ಹೇಳಿದಮೇಲೆ ಅಲ್ಲೇ ಪಕ್ಕದಲ್ಲೇ ಒಂದೆರಡು ಜಿಂಕ್ ಶೀಟು, ಸುತ್ತಾ ಬೇಲಿ ಹಾಕಿ ಒಂದು ಅಂಗಡಿ ತರ ಮಾಡಿಕೊಟ್ರು ಹನುಮಪ್ಪನಿಗೆ. ವಿಕಲಚೇತನರಿಗೆ ಸರಕಾರದವರು ಶೆಡ್ ಹಾಕಿಕೊಡೋ ತರ.

ಆದರೆ ಅದೇನಾಯ್ತೋ ಗುಡಿ ಮೇಲೇಳಲೇ ಇಲ್ಲ. ಮನೆಗೆ- ತೀರಾ ಬಡವರಾದ್ರೆ ಎರಡು ಸಾವಿರ, ಸ್ವಲ್ಪ ಇದ್ದಂತವರಾದರೆ ಐದುಹತ್ತು ಇಸ್ಕೊಂಡು ಬಿಟ್ಟಿದಾರೆ ಬೇರೆ. ಅದರಲ್ಲೂ ನಾಲ್ಕೈದು ಸಾವಿರ ಮನೆ ಇರೋ ಕತ್ತೆಯಂತ ಊರು ನಮ್ಮದು. ಕೆಲವರು ಮಾಮೂಲಿ ತರ ದೇವಾಲಯ ಜೀರ್ಣೋದ್ಧಾರ ಸಮಿತಿ ಮೇಲೆ "ತಿಂದಾಕ್ತಿದಾರೆ ಸೂಳೆಮಕ್ಳು" ಅಂತ ಬೈಕೊಂಡು ಓಡಾಡಿದ್ರು ಬಿಟ್ರೆ ಏನೂ ಮಾಡಲಿಲ್ಲ. ನನಿಗೆ ಇದರ ಬಗ್ಗೆ ಸರಿಯಾಗಿ ಗೊತ್ತಿಲ್ಲ. ಹಂಗಾಗಿ ಇಲ್ಲಸಲ್ಲದ್ದು ಹೇಳಿ ಯಾಕೆ ಸುಮ್ಮನೆ ನಾಳೆ ಹೊತ್ತಾರೆ ಒಂದು ನಿಷ್ಠೂರ?

ಒಂದಂತೂ ಇದ್ರಿಂದ ಉಪಯೋಗ ಆಯಿತು. ಏನಂದ್ರೆ ಊರವರೆಲ್ಲ ಮೊಟ್ಟಮೊದಲ ಬಾರಿಗೆ "ಮಾಯಕೊಂಡದವರಾಗಿ" ಯೋಚಿಸೋದಕ್ಕೆ ಶುರು ಮಾಡಿದರು. ಅದೇನೋ ಸಣ್ಣ ಹಳ್ಳಿಗಳಲ್ಲಿರೋ ತರ ನಮ್ಮೂರಲ್ಲಿ ಒಗ್ಗಟ್ಟಿಲ್ಲ. ಉಪ್ಪಾರ ಹಟ್ಟೀನೇ ಒಂದೂರು, ಕುರುಬರ ಹಟ್ಟೀನೇ ಒಂದೂರು, ಮಾದರ ಹಟ್ಟೀನೇ ಒಂದೂರು, ಸರಾಯದ ಹಟ್ಟೀನೇ ಒಂದೊಂದೂರುಗಳಷ್ಟು ದೊಡ್ಡವಿದಾವೆ. ಊರುಊರುಗಳ ನಡುವೆ ನಡೆಯೋ ಎಲ್ಲ ತರದ ಡ್ರಾಮಾಗಳು ಇಲ್ಲಿ ಕೇರಿಕೇರಿಗಳ ನಡುವೆ ನಡಿತಾವೆ. ಇನ್ನೆಲ್ಲಿಂದ ಒಗ್ಗಟ್ಟು ತರಹೇಳ್ತೀರ? ಯಾರಾದ್ರೂ ನೆರವೂರಿಗೆ ಹೋಗಿ ಗಲಾಟೆಗಿಲಾಟೆ ಮಾಡಿಕೊಂಡರೆ "ಏಯ್ ನಾನು ಇಂತ ಊರೋನು ಗೊತ್ತಾ" ಅಂತ ಒಂದು ಅಸ್ತ್ರ ಬಿಡ್ತಾರೆ. ಅದೇ ನಾವೇನಾದ್ರೂ "ಏಯ್ ನಾನು ಮಾಯಕೊಂಡದೋನು" ಅಂತ ಹೇಳಿದರೆ ಎರಡೇಟು ಹೊಡೆಯೋರು ನಾಕೇಟು ಹೊಡೆದು ಕಳುಸ್ತಾರೆ ಅಂದ್ರೆ ನೀವೇ ಲೆಕ್ಕ ಹಾಕಿ.

ಆದ್ರೆ ಎಲ್ರೂ ಈಗ ಯಾವುದೇ ಊರಿಗೆ ಹೋಗಲಿ ಮಾಯಕೊಂಡದವರಾಗಿ ಮುಜುಗರ ಅನುಭವಿಸೋದಕ್ಕೆ ಶುರು ಮಾಡಿದ್ದರು. "ಇವ್ನೌನ್ ಇಪ್ಪತ್ತು ಮನೆ ಇಲ್ಲ ಇಂತ ಊರವರೂ ಎಂತ ಗುಡಿ ಕಟ್ಟಿದಾರೆ‌. ನಮ್ಮೂರಲ್ಲಿ ಹೇಳಿಕೊಳ್ಳಕೆ ಅಪ್ಪಂತ ಒಂದು ದೇವಸ್ಥಾನ ಇಲ್ವಲ್ಲ" ಅಂತ. ನೀವು ಗಮನಿಸಿರಬಹುದು. ಈಗೀಗ ಎಲ್ಲಾ ಊರಲ್ಲೂ ಎದ್ದು ಕಾಣೋ ತರದ್ದೊಂದು ಹೊಸ ಗುಡಿಗಳು ಕಾಣ್ತವೆ. ಉದ್ದ ಒಂದು ಗೋಪುರ, ಮೇಲೊಂದು ಬಂಗಾರದ್ದು ಅಥವಾ ಬಂಗಾರದ ಪೇಂಟ್ ಹೊಡೆದಿರೋ ಕಳಶ ಇರ‌್ತವೆ. ಅದ್ಯಾವನು ಶುರು‌ಮಾಡಿದನೋ ಗೊತ್ತಿಲ್ಲ. ಆದ್ರೆ ಬಹುತೇಕ ಎಲ್ಲಾ ಊರವರು ಈ ಟ್ರೆಂಡ್ ಅನುಸರಿಸುತ್ತಾ ಅದಾರೆ. ಅಂತೆಯೇ ನಮ್ಮೂರವರೂ.

ಒಟ್ಟಿನಲ್ಲಿ ಇದರಿಂದ ಎಲ್ಲರಲ್ಲೂ "ಮಾಯಕೊಂಡ ನ್ಯಾಷನಲಿಸಂ" ಜಾಗೃತಿಯಾಯಿತು. ಅದಕ್ಕೇ ಇರಬೇಕು ಯಾರೂ ಜಾಸ್ತಿ ಮಾತಾಡದೆ ಕಾಣಿಕೆ ನೀಡಿದ್ದು. ಇದರ ಜೊತೆ ಅನಿಷ್ಟಕ್ಕೆಲ್ಲ ಶನೀಶ್ವರನೇ ಕಾರಣ ಅನ್ನೋ ತರ ಅನಿಷ್ಟಕ್ಕೆಲ್ಲ ಹನುಮಪ್ಪ-ಮಾರೆವ್ವನೇ ಕಾರಣ ಅನ್ನೋದು ನುಡಿಗಟ್ಟೇ ಆಗಿಹೋಯ್ತು. 

ಈ ವರ್ಷ ಮಳೆ ಆಗಲಿಲ್ಲವ? ಹನುಮಪ್ಪ‌ನ್ನ ಹೊರಗಿಟ್ಟಿರುವುದೇ ಕಾರಣ. 

ಒಂದೇ ತಿಂಗಳಲ್ಲಿ ನಾಲ್ಕು ಜನ ಸತ್ತರಾ? ಮಾರಿಹಬ್ಬ ಮಾಡದಿರೋದೇ ಕಾರಣ. 

ಜಿಯೋ ನೆಟ್ವರ್ಕ್ ಸಿಕ್ತಿಲ್ವ? ಮಾರಿಹಬ್ಬ ಮಾಡಿ ಶಾಂತಿ ಮಾಡಿಸಿದ್ರೇನೆ ಇದು ಬಗೆಹರಿಯೋದು. ಹಿಂಗೆ.

ಕೊನೆಗೆ ಸಕಲ ಸಂಕಷ್ಟಗಳಿಗೂ ಹನುಮಪ್ಪನ್ನ ಒಳಗೆ ಹಾಕಿ ಮಾರಿಹಬ್ಬ ಮಾಡುವುದೊಂದೇ ಪರಿಹಾರ ಅನ್ನುವಂತಾಯಿತು. ವರ್ಷದ ಮೊದಲೇ "ಮುಂದಲ ವರ್ಷ ಮಾರಿಹಬ್ಬ" ಅಂತ ಸಾರಿಸಿದರು. ಜನಗಳು ಕುರಿಮರಿಗಳನ್ನ ತಂದು ಕಟ್ಟಿಕೊಳ್ಳತೊಡಗಿದರು. ತಮ್ಮತಮ್ಮ ಆರ್ಥಿಕತೆಗನುಗುಣವಾಗಿ. ಕೆಲವೊಬ್ರು ಒಂದು, ಕೆಲವೊಬ್ರು ಎರಡು, ಕೆಲವೊಬ್ರು ಮೂರು.. ಹಿಂಗೆ.


ಆದ್ರೆ ಸಾರ ಹಾಕಿ ಏಳೆಂಟು ತಿಂಗಳಾದರೂ ಹನುಮಪ್ಪ ಹೊರಗೇ ನಿಂತಿದ್ದ. ಬಳಲಿ ಬೆಂಡಾಗಿ ಇನ್ನೇನು ಕುಸಿದು ಬೀಳೋ ತರ. ಸಾರ ಹಾಕಿಸಿ ಹಬ್ಬ ಮಾಡಲಿಲ್ಲ ಅಂದ್ರೆ ಊರಿನ ಮರ್ಯಾದೆ ಏನಾಗಬೇಕು? ಆದರೆ ಗುಡಿ ಮುಗಿಯೋದಿರಲಿ ಮುಗಿಯೋ ಲಕ್ಷಣಗಳೂ ಕಾಣ್ತಿಲ್ಲ. ಮಠ ಸಿನಿಮಾದಲ್ಲಿ ಶಿಲ್ಪಿ ಮಯೂರವರ್ಮ ಜಕಣಚಾರಿ ಹೇಳೋ ತರ "ಇನ್ನೆರಡು ತಿಂಗಳಲ್ಲಿ ಕೆಲಸ ಕಮೆನ್ಸು, ಒಂದ್ ತಿಂಗಳಲ್ಲಿ ಫಿನಿಶ್ಶು" ಅಂತ ಹೇಳ್ತಾನೆ ಇದ್ರು. ಕೊನೆಗೆ ತರಾತುರಿಯಲ್ಲಿ ಗರ್ಭಗುಡಿಗೆ ಛಾವಣಿ ಹೊದಿಸಿ ಅದರಲ್ಲೇ ದೇವರನ್ನ ಕೂರಿಸಿ ಕೈತೊಳೆದುಕೊಂಡರು.  ಸುತ್ತಾ ಅರ್ಧ ಎದ್ದಿರೋ ಗೋಡೆಗಳೆಲ್ಲ ಕಾಂಪೌಂಡ್ ತರ, ನಡುವೆ ಗರ್ಭಗುಡಿ ಸಣ್ಣ ರೂಂ ತರ ಹಾಸ್ಯಾಸ್ಪದವಾಗಿ ಕಾಣ್ತಿತ್ತು. ಇವತ್ತಿಗೂ ಹಂಗೇ ಐತೆ.

ಅಂತೂ ಮಾರಿಹಬ್ಬಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಾಯ್ತು.  ಹಬ್ಬ ಹತ್ತತ್ರ ಬಂದ್ಹಂಗೆ ನೋಡಬೇಕಿತ್ತು ಜನಗಳ ಸಂಭ್ರಮಾನ. ಮನೆ ರಿಪೇರಿ ಮಾಡದೇನ್ ಕೇಳ್ತೀಯ. ಮನೆ ಮಗ್ಗುಲಲ್ಲಿ ಊಟದ ಟೇಬಲ್ಲು-ಶಾಮಿಯಾನ ಹಾಕ್ಸಕೆ ಗಿಡಗೆಂಟೆ ಸವರಿ ಕ್ಲೀ‌ನ್ ಮಾಡದೇನ್ ಕೇಳ್ತೀಯ. ಕಟ್ಟಿಗೆ ಸೀಳದೇನ್ ಕೇಳ್ತೀಯ. ನೆಂಟರ ಮನೆಯಿಂದ ಮಾಂಸ ಕೊಚ್ಚಲು ಮಚ್ಚು-ಕೊರಡು-ಪಾಟು ತರದೇನ್ ಕೇಳ್ತೀಯ. ಅಬ್ಬಬ್ಬಬ್ಬಬ್ಬಬ್ಬ! ಏನ್ ಸೀಮೆಗಿಲ್ಲದ ಹಬ್ಬ ಇವರೇ ಮಾಡ್ತಿದಾರೆ ಅನ್ನೋ ತರ. ಹೇಳ್ತಾ ಹೋದ್ರೆ ಮುಗಿಯದಿಲ್ಲ. ಇದರ ಬಗ್ಗೆ ಇನ್ಯಾವಾಗಲಾದ್ರೂ ಬರಿತೀನಿ ಬಿಡಿ. 

ಅಂತೂ ಬಂದೇ ಬಿಡ್ತು ಹಬ್ಬ. ಎಳಪುಗಳೆಲ್ಲ ಆರ್ಕೆಸ್ಟ್ರಾಗೆ ಕಾಯ್ತಿದ್ವು. ಸೊಲ್ಪ ಬಲಿತವು ಕುಸ್ತಿ ನೋಡಕೆ ಕಾಯ್ತಿದ್ವು. ದೊಡ್ಡವರು ಸಣ್ಣವರು ಅನ್ನದೇ ಗಂಡಸರೆಲ್ಲಾ ಕುಡಿಯೋಕೆ ಕಾಯ್ತಿದ್ವು. ಹುಡುಗಿಯರು ಬಳೆಗಿಳೆ ತಗಳಕೆ, ಪಿಳ್ಳೆಪಿಚ್ಕಿಗಳು ಆಟದ ಸಾಮಾನು ತಗಳಕೆ ಕಾಯ್ತಿದ್ವು. ಇನ್ನು ಬೇರೆ ಊರವರೆಲ್ಲ "ಇಷ್ಟು ದಿನ ಇವರಿಗೆ ತಿನ್ನಿಸಿದ್ದೆಲ್ಲ ಬಡ್ಡಿ ಸಮೇತ ವಸೂಲಿ ಮಾಡಬೇಕು" ಅಂತ ಉಣ್ಣಕೆ ಕಾಯ್ತಿದ್ರು. ನಾನು ಕೋಣ ಕಡಿಯೋದು ನೋಡಕೆ ಕಾಯ್ತಿದ್ದೆ.

ತಗಳ್ರಿ ಪೊಲೀಸರ ಮಾಮೂಲಿ ರೊಂಕಲು ಶುರವಾಯ್ತು. ಕೋಣ ಕಡಿಯಂಗಿಲ್ಲ ಅಂತ. ಅಲೆ ಇವ್ನ. ಕೋಣ ಕಡಿದಲೆ ಶಾಟ ತರಿಯಕೆ ಮಾರಿಹಬ್ಬ ಮಾಡಬೇಕ? ಕೋಣ ಕಡಿದು ಸರಗ ಹೊಡೆಯದಿದ್ದರೆ ಮಾರಿಹಬ್ಬ ಮಾಡಿದರೂ ಒಂದೇ ಬಿಟ್ಟರೂ ಒಂದೇ. (ಸರಗ ಹೊಡೆಯೋದು- ಅಂದರೆ ಕಳ್ಳುಪಚ್ಚಿ-ಧವಸ ಧಾನ್ಯಗಳನ್ನು ಊರ ಸುತ್ತ ಎಸೆದುಕೊಂಡು ಬರುವುದು. ಊರ ಮೇಲೆ ಕೆಟ್ಟ ಕಣ್ಣು ಬೀಳದಿರಲಿ ಅಂತ)

ಪೊಲೀಸರು ಕ್ಯಾತೆ ಎತ್ತಬಹುದು ಅಂತ ನಮ್ಮವರು ಮೊದಲೇ ಇದಕ್ಕೆಲ್ಲ ರೆಡಿಯಾಗಿದ್ದರು. ಊರಲ್ಲಿ ಐದು ಕೋಣಗಳನ್ನ ಓಡಾಡಿಕೊಂಡಿರಲು ಬಿಟ್ಟಿದ್ದರು. ಪೊಲೀಸರಿಗೆ ಗೊಂದಲ ಉಂಟುಮಾಡಲು. ಪೊಲೀಸರಿಗೆ ಇವುಗಳಲ್ಲಿ ಯಾವುದು ಬಲಿ ಕೋಣ ಎಂದು ತಿಳಿಯದೆ ಹುಚ್ಚು ಬಂದು ನೆಲ ಕೆರೆಯುವುದೊಂದು ಬಾಕಿ. ಕೊನೆಗೆ ಒಂದೆರಡು ಕೋಣಗಳನ್ನ ತಂದು ಸ್ಟೇಷನ್ನಿನಲ್ಲಿ ಕಟ್ಟಿಕೊಂಡಿದ್ದರು. ಪೊಲೀಸರು ಠಾಣೆಯ ಆವರಣದಲ್ಲಿ ಕೋಣಗಳಿಗೆ ಹುಲ್ಲು ಹಾಕುವುದು ಒಂತರ ತಮಾಷೆಯಾಗಿ ಕಾಣ್ತಿತ್ತು.


ಹಬ್ಬದ ದಿನವೂ ಅಷ್ಟೇ. ಮುಕ್ಳಾರೆ ಎಚ್ಚರಿಕೆಯಿಂದ ಇದ್ರಂತೆ ಪೊಲೀಸೋರು. ಏನೇ ಆದರೂ ಕೋಣ ಕಡಿಯಕೆ ಬಿಡಬಾರದು‌ ಅಂತ. ಅವರಲ್ಲಿ ಕೆಲವರು ಕೋಣಗಳು ನಮ್ಮ ಸ್ಟೇಷನ್ನಲ್ಲೇ ಬಿದ್ದಾವಲ್ಲ‌ ಅಂತಲೋ ನಾಕು ಗಂಟೆ ಆಗ್ಲಿ ತಡಿ ಅಂತಲೋ ಉದಾಸೀನದಿಂದ ಇದ್ದಿರಲೂಬಹುದು. ಸರಿ‌ ಮಾರೆವ್ವನ‌ ಗುಡಿ‌ ಮುಂದೆ  ಪೂಜೆ ಆಗ್ತಿದೆ. ಎಲ್ರೂ ಏನೂ ಗೊತ್ತಿಲ್ಲದವರ ತರ ಕೈ ಮುಕ್ಕೊಂಡು‌ ನೋಡ್ತಾ ನಿಂತಿದಾರೆ.‌ ಈ ಗಲಾಟೆಯ ನಡುವೆ ಒಬ್ಬ ಇನ್ನೊಬ್ಬನಿಗೆ ಕಣ್ಣು ಹೊಡೆದು ಸನ್ನೆ ಮಾಡಿದ್ದು ಪೊಲೀಸರಿಗೇ ಕಾಣಲೇ ಇಲ್ಲ. ಅದಾದ ಕೆಲವೇ ಕ್ಷಣಕ್ಕೆ ಯಾರೋ ಟ್ರಾನ್ಸ್‌ಫಾರ್ಮರ್‌ಗೆ ಕಲ್ಲು ಹೊಡೆದ ಸದ್ದು. ಕರೆಂಟು ಹೋಯ್ತಾ? ಎಲ್ಲಾ ಕಡೆ ಕತ್ಲು. ಹಿಂಗೆ ಗಜಿಬಿಜಿಯಲ್ಲಿ ಐದು ನಿಮಿಷ ಬಿಟ್ಟು ಕರೆಂಟು ಬಂದಾಗ ಯಾವನೋ ಒಬ್ಬ ಕೋಣದ ತಲೆ ಹಿಡಿದುಕೊಂಡು ಬರುತ್ತಿದ್ದನಂತೆ. ಛೇ.. ಕೋಣ ಕಡಿಯೋದು ನೋಡದಿದ್ದರೂ ಅವಾಗ ಪೊಲೀಸರ ಮುಖ ನೋಡೋದಕ್ಕಾದರೂ ಅಲ್ಲಿರಬೇಕಿತ್ತು.

"ನನಿಗೇ ನೋಡಕಾಗ್ಲಿಲ್ಲ. ಫೋನ್ ಇಡಾ ನಿಮ್ಮೌನ್" ಎಂದು ಬೈದು ಫೋನ್ ಕಟ್ ಮಾಡಿದ ಕಿರಣ. ನಾನು ಹನ್ನೆರಡು ವರ್ಷಕ್ಕೆ ಅಲಾರಂ ಇಟ್ಟು ಮತ್ತೆ ಮಲಗಿದೆ.

6 comments:

  1. ನೀನು ಮೂರೂವರೆಗೆ ಅಲಾರಂ ಇಟ್ಟಿದ್ದು ಮಾತ್ರ ಕಾಲ್ಪನಿಕ ಅನ್ಸುತ್ತೆ.

    ReplyDelete
  2. Kiran Kumar, neevey naa idu!! Nammanna marethubittraa!!

    ReplyDelete
  3. Olle baraha. Mayakondavaragi intaha anubhavakkoskara praytna pattidduntu, adaro Kona kadiyodu nodakaglilla. Namma anubhana meluku hakidahagittu. Adu Mayakondada languagenalli.

    ReplyDelete