Sunday, 11 December 2022

ರೆಡ್ ಡೆಡ್ ರಿಡೆಂಪ್ಷನ್ 2

ಮನುಷ್ಯನ ಇತಿಹಾಸ ನೋಡಿದ್ರೆ ಗುಹೆಯಲ್ಲಿ ಇದ್ದಿಲಿಂದ ಚಿತ್ರ ಗೀಚೋದ್ರಿಂದ ಶುರುವಾಗಿ ಯಾವಾಗ್ಲೂ ಯಾವುದಾದ್ರೂ ಒಂದು ರೀತಿಯಿಂದ ಕತೆ ಹೇಳೋದಕ್ಕೆ ಪ್ರಯತ್ನ ಮಾಡ್ತಾನೇ ಇರೋದು ಕಾಣ್ಸತ್ತೆ. ಚಿತ್ರ, ಹಾಡು, ಆಮೇಲೆ ಬರವಣಿಗೆ, ಮತ್ತೆ ಕಳೆದ ನೂರಿಪ್ಪತ್ತು ವರ್ಷಗಳಿಂದ ಸಿನಿಮಾ.. ಹಿಂಗೆ ಹೊಸ ಹೊಸ ವಿಧಾನಗಳು ಸಿಕ್ಕಂಗೂ ಮನುಷ್ಯ ಅವೆಲ್ಲಾದನ್ನೂ ಉಪಯೋಗುಸ್ಕೊಂಡು ಕತೆ ಹೇಳ್ತಾನೆ ಇದಾನೆ. ಅದಕ್ಕೆ ಹೊಸ ಸೇರ್ಪಡೆ ವಿಡಿಯೋ ಗೇಮ್ಸ್. 

ನೀವ್ ನನ್ ತರ ಮೊನ್ ಮೊನ್ನೆಯವರೆಗೂ ವಿಡಿಯೋ ಗೇಮ್ಸ್‌ ಬಗ್ಗೆ ಗೊತ್ತೇ ಇಲ್ದಂಗ್ ಇರೋರಾಗಿದ್ರೆ ಇವ್ನ್ ಯಾವನ್ ಗುರು ಹೋಗಿ ಹೋಗಿ ವಿಡಿಯೋ ಗೇಮ್ಸ್‌ನ ಸಾಹಿತ್ಯಕ್ಕೆ-ಸಿನಿಮಾಕ್ಕೆ ಹೋಲಿಸ್ತಿದಾನೆ ಅಂತ ಅನ್ನಿಸಬಹುದು. ಆದ್ರೆ ಇವಾಗ ರೆಡ್ ಡೆಡ್ ರಿಡೆಂಪ್ಷನ್ 2 ಆಡಿ ಮುಗಿಸಿದ ಮೇಲೆ ನನಗೆ ಯಾವ ಡೌಟೂ ಉಳಿದಿಲ್ಲ‌- ವಿಡಿಯೋ ಗೇಮ್ ಸಿನಿಮಾ & ಸಾಹಿತ್ಯ ಎರಡಕ್ಕೂ ಮೀರಿದ ಸಾಧ್ಯತೆಗಳನ್ನ ಹೊಂದಿರೋ ಅಷ್ಟೇ ಪವರ್‌ಫುಲ್ ಆದ ಆರ್ಟ್ ಫಾರ್ಮ್.

ಒಂದೊಂದ್ ಆರ್ಟ್ ಫಾರ್ಮ್‌ಗೂ ಬೇರೆ ಮೀಡಿಯಂಗೆ ಸಾಧ್ಯವಿಲ್ಲದ ತನ್ನದೇ ಆದ ಎಕ್ಸ್‌ಕ್ಲೂಸಿವ್ ಅಂಶ ಇರತ್ತೆ. ಸಿನಿಮಾಕ್ಕೆ ಎಡಿಟಿಂಗ್ ಇದ್ಯಲ್ಲ ಹಂಗೆ. ಅದೇ ತರ ವಿಡಿಯೋ ಗೇಮಿಗೇ ಸ್ಪೆಸಿಫಿಕ್ಕಾಗಿರುವ ಅಂಶ ಅಂದ್ರೆ ಅದು ಕ್ರಿಯೇಟ್ ಮಾಡೋ ಓಪನ್ ವರ್ಲ್ಡ್. ಸಿನಿಮಾದಲ್ಲಿ ಫಿಲ್ಮ್ ಮೇಕರ್ ರೆಕಾರ್ಡ್ ಮಾಡಿಕೊಂಡು ಬಂದು ತೋರಿಸಿದ್ದು ಮಾತ್ರ ಆ ಕತೆಯ ಪ್ರಪಂಚ. ಆದ್ರೆ ವಿಡಿಯೋ ಗೇಮ್‌ನಲ್ಲಿ ಇಡೀ ಆ ಕತೆಯ ಪ್ರಪಂಚಾನ ಕ್ರಿಯೇಟ್ ಮಾಡಿ ನಿಮ್ಮನ್ನ ಒಂದು ಪಾತ್ರವಾಗಿ ಅದರೊಳಗೆ ಬಿಡ್ತಾರೆ. ನೀವು ಅದ್ರಲ್ಲಿ ಎಲ್ಲಿ ಬೇಕಾದರೂ ಓಡಾಡಬಹುದು. ಐವತ್ತು ವರ್ಷದ ಕೆಳಗೆ ಇದನ್ನ ಯಾರಿಗಾದ್ರೂ ಹೇಳಿದ್ರೆ ಸೈನ್ಸ್ ಫಿಕ್ಷನ್ ಅನ್ಕೊತಿದ್ರು. ಆದ್ರೆ ಟೆಕ್ನಾಲಜಿ ಯಾವ್ ಲೆವೆಲ್ಲಿಗೆ ಹೋಗಿದೆ ಅಂದ್ರೆ ವಿ ಆರ್ ಲಿವಿಂಗ್ ದಟ್ ಸೈನ್ಸ್ ಫಿಕ್ಷನ್ ನೌ. ವಾಟ್ ಎ ಟೈಂ ಟು ಬಿ ಅಲೈವ್ :)

1890ರ ಸುಮಾರಿನಲ್ಲಿ ಅಮೆರಿಕದ ವೈಲ್ಡ್ ವೆಸ್ಟ್‌ನಲ್ಲಿ ನಡೆಯೋ ಕತೆ ರೆಡ್ ಡೆಡ್ ರಿಡೆಂಪ್ಷನ್ 2. "ವೆಸ್ಟರ್ನ್" ಅನ್ನೋದು ಇವಾಗ ಒಂದ್ ಜಾನರ್ರೇ ಆಗೋಗಿದೆ ಅದ್ರ ಬಗ್ಗೆ ಇಲ್ಲಿ ಮತ್ತೆ ಇಂಟ್ರಡಕ್ಷನ್ ಬೇಕಾಗಿಲ್ಲ. ಇಲ್ಲಿ ನಮ್ಮ ಪ್ರೊಟಾಗನಿಸ್ಟ್ ಆರ್ಥರ್ ಮೋರ್ಗನ್ ಒಬ್ಬ Outlaw. ಬ್ಲ್ಯಾಕ್ ವಾಟರ್ ಅನ್ನೋ ಅವರ ಊರಿನಲ್ಲಿ ಇವರ ದರೋಡೆ ಪ್ಲಾನ್ ಯಡವಟ್ಟಾಗಿ ಪೊಲೀಸರು ಬೆನ್ನುಬಿದ್ದು ಊರು ಬಿಟ್ಟು ತಲೆತಪ್ಪಿಸಿಕೊಂಡು ಬಂದಿದ್ದಾನೆ. ಒಬ್ಬನೇ ಅಲ್ಲ- ತನ್ನ ಗ್ಯಾಂಗಿನೊಂದಿಗೆ. ಈ ಗ್ಯಾಂಗಿನಲ್ಲಿ ಹೆಂಗಸರಿದ್ದಾರೆ. ಮುದುಕರಿದ್ದಾರೆ. ಗಂಡ-ಹೆಂಡತಿಯರಿದ್ದಾರೆ. ಒಬ್ಬ ಸಣ್ಣ ಹುಡುಗನೂ ಇದ್ದಾನೆ.

ಊರು ಬಿಟ್ಟು ಬಂದ ಇವರ ತಲೆಮೇಲೆ ಇವಾಗ ಬೌಂಟಿ ಇದೆ. ಅಂದ್ರೆ ಹಿಡಿದುಕೊಟ್ಟವರಿಗೆ ಬಹುಮಾನ ಅಂತ. ಈಗ ಇವರ ಮುಂದಿರುವ ಮೊದಲನೇ ದಾರಿ ಪೋಲಿಸರ ಕೈಗೆ ಸಿಕ್ಕಿಕೊಳ್ಳದಿರುವುದು. ಎರಡನೆಯದು ಸ್ವಲ್ಪ ದುಡ್ಡು ಮಾಡಿಕೊಂಡು ದೇಶಾಂತರ ಹೋಗುವುದು. ದುಡ್ಡು ಮಾಡುವುದು ಅಂದ್ರೆ ಏನು ಕೂಲಿನಾಲಿ ಮಾಡಿ ಅಲ್ಲ. ದರೋಡೆ, ಕಳ್ಳತನ, ಮೋಸ etc. ಈ ನಡುವೆ ಇವರ ಜೀವನದಲ್ಲಿ ಏನೇನೆಲ್ಲ ಆಗತ್ತೆ ಅನ್ನೋದೇ ಕತೆ. ಈ ಗ್ಯಾಂಗಿನ ಜೊತೆಗಾರನಾಗಿ ಅವರ ಯೋಗಕ್ಷೇಮ ನೋಡಿಕೊಂಡು ಅವರ ಚಟುವಟಿಕೆಗಳಲ್ಲಿ ಭಾಗವಹಿಸುವುದು ಆರ್ಥರ್ ಮೋರ್ಗನ್ ಕೆಲಸ. ಅಂದ್ರೆ ಗೇಮ್ ಆಡೋರ್ ಕೆಲಸ.

ಬರೀ ಇಷ್ಟೇ ಆಗಿದ್ರೆ ಇದು ಆರ್ಟ್ ಆಗ್ತಿರಲಿಲ್ಲ. ಈ ಗ್ಯಾಂಗಿನ ಪ್ರತಿಯೊಂದು ಪಾತ್ರಕ್ಕೂ ವ್ಯಕ್ತಿತ್ವ ಇದೆ. ಅವರದ್ದೇ ಹಿನ್ನೆಲೆ ಇದೆ. ಅವರದ್ದೇ ಅಭಿಪ್ರಾಯಗಳಿವೆ. ಗೇಮ್ ಆಡ್ತಾ ಆಡ್ತಾ ಇವರನ್ನೆಲ್ಲ ಎಷ್ಟು ಹಚ್ಚಿಕೊಂಡುಬಿಡ್ತೀವಿ ಅಂದ್ರೆ ನೀವ್ ನಂಬಲ್ಲ. ಈ ಪಾತ್ರಗಳಿಗೆಲ್ಲ ವಾಯ್ಸ್ ಕೊಟ್ಟಿರೋ ನಟರು ಮತ್ತೆ ಆ ಪ್ರದೇಶದ ಆ ಕಾಲದ ಭಾಷೆಯನ್ನ ಯಾವ್ ಸಿನಿಮಾಕ್ಕೂ ಕಮ್ಮಿ ಇಲ್ಲದೇ ಅಥೆಂಟಿಕ್ಕಾಗಿ ತಂದಿರೋದಂತೂ ಸೂಪರ್.

ಇವರು ಕ್ರಿಯೇಟ್ ಮಾಡಿರೋ ಆ ವೈಲ್ಡ್ ವೆಸ್ಟ್ ವರ್ಲ್ಡ್‌ನ ನೀವು ಆಡೀನೇ ಸವಿಬೇಕು. ಸುಮ್ನೆ ಒಂದು ಮನೆಗೆ ನುಗ್ಗಿದ್ರೂ ಅಲ್ಲಿರೋ ತಟ್ಟೆಲೋಟ ಚಮಚಾನೂ ಆಗಿನ ಕಾಲದ್ದೇ ಆಗಿರತ್ತೆ. ದಾರಿಗುಂಟ ಕುದುರೆ ಮೇಲೆ ಹೋಗ್ತಿದ್ರೆ ಸಡನ್ನಾಗಿ ಯಾರೋ ಕಿರುಚ್ತಿರೋದು ಕೇಳತ್ತೆ. ನಿಮ್ಮ ಪಾಡಿಗೆ ನೀವು ಹೋಗಬಹುದು. ಆದ್ರೆ ಏನಿದು ಸದ್ದು ಅಂತ ನೀವು ಸದ್ದು ಬಂದ ದಿಕ್ಕಿನ ಕಡೆಗೆ ಹೋಗೋಕೆ ಡಿಸೈಡ್ ಮಾಡಿದ್ರೆ ಅಲ್ಲಿ ಯಾರೋ ಒಬ್ಬನಿಗೆ ತೋಳ ಅಟ್ಯಾಕ್ ಮಾಡ್ತಾ ಇರತ್ತೆ. ಅಥ್ವಾ ಯಾರೋ ಕಳ್ಳ ದರೋಡೆ ಮಾಡ್ತಾ ಇರ್ತಾನೆ. ಅಥ್ವಾ ಹಾವು ಕಚ್ಚಿರತ್ತೆ. ಅಥವಾ ಯಾರೋ ಹೆಂಗಸಿಗೆ ಕುದುರೆ ಕೈಕೊಟ್ಟು ಕಾಡಿನ ಮಧ್ಯ ಒಂಟಿಯಾಗಿರ್ತಾಳೆ. ನೀವು ಹೆಲ್ಪ್ ಮಾಡಬಹುದು ಅಥವಾ ನಿಮ್ಮ ಪಾಡಿಗೆ ನೀವು ಹೋಗಬಹುದು.

ವರ್ಲ್ಡ್ ಅಂದ್ರೆ ಬರೀ ಮನೆ, ಊರು ಕಾಡು ಅಷ್ಟೇ ಅಲ್ವಲ್ಲ. ಅಲ್ಲಿರೋ ಜನ. ಅಲ್ಲಿ ನಡಿಯೋ ಘಟನೆಗಳು. ಅವಾಗಿನ ರಾಜಕೀಯ ಸ್ಥಿತಿ ಇವೆಲ್ಲ ಕತೆ ನಡೆಯೋ ಕಾಲ ಮತ್ತೆ ಜಾಗಕ್ಕೆ ಸರಿಯಾಗಿರಬೇಕು. ಅದೆಲ್ಲ ಸೇರಿ "ವರ್ಲ್ಡ್" ಅಂತ ಆಗೋದು. ಉದಾಹರಣೆಗೆ ನಮ್ಮ ಗ್ಯಾಂಗ್ ಲೀಡರ್ ಪೋಲಿಸರನ್ನ ಎದುರು ಹಾಕಿಕೊಂಡು ಇವಾಗ ನೇಟಿವ್ ಇಂಡಿಯನ್ಸ್ ಜೊತೆಗೆ ಸೇರಿಕೊಂಡು ಪೋಲಿಸರ ಮೇಲೆ ದಾಳಿಗೆ ಇಳಿದಿದ್ದಾನೆ. ಆದ್ರೆ ಆರ್ಥರ್‌ಗೆ ಗೊತ್ತು ಇವನು ಇಂಡಿಯನ್ಸ್‌ಗೆ ಹೆಲ್ಪ್ ಮಾಡ್ತಿದೀನಿ ಅನ್ನೋದು ನಾಟಕ. ಇಂಡಿಯನ್ಸ್ ಮೇಲೆ ಪೋಲಿಸರ ಗಮನ ಹೋದರೆ ತಾನು ಬಚಾವಾಗೋದು ಸುಲಭ ಅನ್ನೋದು ಗ್ಯಾಂಗ್ ಲೀಡರ್ ಉದ್ದೇಶ ಅಂತ. ಈ ಕತೆಯ ಈ ಭಾಗ ಸಾವಿರ ರೀತಿಯಲ್ಲಿ ಇರಬಹುದಿತ್ತು. ಆದರೆ ಗೇಮ್ ಡೆವಲಪರ್ಸ್‌ ಇದನ್ನೇ ಆರಿಸಿಕೊಂಡಿದ್ದಕ್ಕೇ ಇದು ಆರ್ಟ್ ಅನ್ನಿಸಿಕೊಳ್ಳೋದು. ಯಾಕಂದರೆ ವರ್ಲ್ಡ್ ಅಂದರೆ ಬರೀ ಮನೆ, ಊರು, ಕಾಡು ಅಷ್ಟೇ ಅಲ್ಲ. ಅಲ್ಲಿನ ಇತಿಹಾಸ ಕೂಡಾ. ಈ ಕತೆಯನ್ನ ಸಿನಿಮಾನೂ ಮಾಡಬಹುದಿತ್ತು. ಕಾದಂಬರಿ ಮೂಲಕಾನೂ ಹೇಳಬಹುದಿತ್ತು. ಆದರೆ ವಿಡಿಯೋ ಗೇಮ್ ಆಗಿ ಇದು ಕೊಡುವ ಅನುಭವಾನ ಅವೆರಡೂ ಕೊಡೋದಕ್ಕೆ ಸಾಧ್ಯ ಆಗ್ತಿರಲಿಲ್ಲ. ಒಟ್ನಲ್ಲಿ RDR2 ಈಸ್ ಎ ಮಾಸ್ಟರ್‌ಪೀಸ್. ಆದ್ರೆ ಸಿನಿಮಾಕ್ಕೆ ಆಸ್ಕರ್, ಪುಸ್ತಕಕ್ಕೆ ಪುಲಿಟ್ಜರ್ ಸಿಗೋ ತರ ವಿಡಿಯೋ ಗೇಮ್ಸ್‌ಗೆ ಏನೂ ಸಿಗಲ್ಲ‌. ಅದೇನ್ ದರಿದ್ರ ಗೇಮ್ ಆಡ್ತಿಯ ಸಾಕು ಊಟ ಮಾಡು ಬಾ ಅನ್ನೋ ಅಮ್ಮನ ಬೈಗುಳ ಮಾತ್ರ :(