ನಮ್ಮಜ್ಜಿ ಊರು ಒಂದು ಮುನ್ನೂರು ನಾನೂರು ಮನೆ ಇದ್ದ ಕುಗ್ರಾಮ. ಯಾವ್ದೇ ಹೇಳ್ಕೊಳೋ ಅಂತ ರೋಡ್ ಪಕ್ಕ ಇಲ್ದೇ ಇದ್ದಿದ್ರಿಂದ ಒಂದೇ ಒಂದು ಗೌರ್ಮೆಂಟ್ ಬಸ್ ಇದ್ದಿದ್ದು ಅಲ್ಲಿಗೆ. ಅದೊಂದೇ ದಿನಕ್ ಮೂರ್ ಸಲ ದಾವಣಗೆರೆಗೆ ತಿರ್ಗಾಮುರ್ಗಾ ಓಡಾಡ್ತಿತ್ತು. ಬೆಳಿಗ್ಗೆ ಆರೂವರೆಗೆ ಊರ್ ಬಿಟ್ಟು ಒಂಬತ್ ಗಂಟೆಗೆ ವಾಪಸ್ ಬರ್ತಾ ನಾಕೈದ್ ನ್ಯೂಸ್ ಪೇಪರ್ ತರ್ತಾ ಇತ್ತು. ಅದು ಊರಿನ್ ಲೈಬ್ರರಿ ಲೆಕ್ಕದಲ್ಲಿ. ಆದ್ರೆ ಅಲ್ಲಿ ಲೈಬ್ರರಿ ಅಂತ ಯಾವ್ ಬಿಲ್ಡಿಂಗೂ ಇರ್ಲಿಲ್ಲದ ಕಾರಣ ಎಲ್ರೂ ಹತ್ತು ಗಂಟೆಗೆ ಸ್ಕೂಲ್ ಬೆಲ್ ಹೊಡೆಯೋವರೆಗೆ ಸಾಲಿಗುಡಿ ಹತ್ರ ಪೇಪರ್ ಹರಡಿಕೊಂಡು ಓದ್ತಿದ್ರು. ಮಾಮೂಲಿ ದಿನ ಯಾವನೂ ಕ್ಯಾರೆ ಅಂತಿರಲಿಲ್ಲ. ಕ್ರಿಕೆಟ್ ಇದ್ದ ತಿರುಗು ದಿನ ಮತ್ತೆ ಶುಕ್ರವಾರ ಸಿನಿಮಾ ಪುರವಣಿ ಇದ್ದಾಗ ಮಾತ್ರ ಅದಕ್ಕೆ ಎಲ್ರೂ ಮುಗಿ ಬೀಳ್ತಿದ್ದಿದ್ದು. ಅವನೊಂದ್ ಶೀಟು ಇವನೊಂದ್ ಶೀಟು ಓದಿ ಯಾವ್ದೋ ಪೇಪರ್ ಶೀಟನ್ನ ಇನ್ಯಾವ್ದ್ರ ನಡುವೇನೋ ಇಟ್ಟು ಎಲ್ಲಾ ಕಳಸಂಬಳಸ ಆಗಿರೋದು. ಅರ್ಧ ಸುದ್ದಿ ಕೊಟ್ಟು 8ನೇ ಪುಟದಲ್ಲಿ ಮುಂದುವರೆಸಿದ್ದರೆ ಅದ್ಯಾವನತ್ರ ಇದೆ ಅಂತ ಹುಡುಕಾಡಬೇಕಿತ್ತು.
ಊರಿನ ಮಧ್ಯ ಕ್ರಿಕೆಟ್ ಗ್ರೌಂಡ್ ತರ ಖಾಲಿ ಜಾಗ, ಅದ್ರ ಸುತ್ತಾ ಕುಂತ್ಕಳಕೆ ಇರೋ ಪೆವಿಲಿಯನ್ ತರ ಮನೆಗಳು. ಹಿಂಗಿತ್ತು ಆ ಊರು. ನಮ್ಮಜ್ಜಿ ಮನೆ ಇದ್ದಿದ್ದು ನಟ್ಟ ನಡುವೆ ಅಂತ ಹೇಳ್ಬೋದು. ಹಂಗಾಗಿ ಊರ ಗಂಡಸ್ರೆಲ್ಲಾ ಕ್ರಿಕೆಟ್ ನೋಡೋಕೆ ನಮ್ಮನೆಗೇ ಬರ್ತಿದ್ರು. ಹಿಂಗೆ ಬಂದವ್ರೆಲ್ಲಾ ಮನೆ ಪಕ್ಕ ಗೋಡೆಗೆ ಉಚ್ಚೆ ಹೊಯ್ದು ಉಚ್ಚೆ ಸಿನುಗು ಹೊಡಿತಾ ಇತ್ತು. ಅದಕ್ಕೇ ನಮ್ಮಜ್ಜಿಗೆ ಇವರನ್ನ ಕಂಡ್ರೆ ಆಗ್ತಿರಲಿಲ್ಲ. ಯಾರೂ ಮನೆ ಹತ್ರ ಉಚ್ಚೆ ಹೊಯ್ಯದಂತೆ ನೋಡ್ಕೊಳೋ ಜವಾಬ್ದಾರಿ ನನಿಗ್ ಬೀಳ್ತಿತ್ತು. ಕ್ರಿಕೆಟ್ ಇಲ್ದಾಗ್ಲೂ ಎಲ್ಲಾ ಬೈಸರೆ ಸೇರಿ ಉಣ್ಣೋ ಟೈಮ್ ಆಗೋ ತನಕ ಅಲ್ಲೇ ಮಾತಾಡ್ತಾ ಬಿದ್ದಿರ್ತಿದ್ರು. ಹಂಗಾಗಿ ನನಿಗೆ ಇಂತವ್ರ ಸಂಗ ಎಲ್ಲಾ ಇತ್ತು. ಆವಾಗ ನನಿಗೆ ಹತ್ತು ವರ್ಷ ಇರಬೇಕು. ಸುಮ್ನೆ ಹೋಗಿ ಇವರ ಗುಂಪಿನ ನಡುವೆ ಕುಂತು ದೊಡ್ಡವ್ರ ದೊಡ್ಡ ಮಾತೆಲ್ಲ ಆಲಿಸೋದೆ ಅವಾಗ ಎಂಟರ್ಟೇನ್ಮೆಂಟ್. ನನಿಗೆ ಬ್ಲೂಫಿಲ್ಮ್ ಬಗ್ಗೆ ಎಲ್ಲಾ ಗೊತ್ತಾಗಿದ್ದು ಇವ್ರಿಂದಾನೆ. ಇದ್ನೆಲ್ಲಾ ಯಾಕ್ ಹೇಳ್ದೆ ಅಂದ್ರೆ ಹೊರಪ್ರಪಂಚದಿಂದ ಬಹಳ ಕಮ್ಮಿ ಸಂಪರ್ಕ ಇದ್ದು ಅದ್ರಷ್ಟಕ್ಕದೇ ಒಂದ್ ಪ್ರಪಂಚ ಆಗಿತ್ತು ಆ ಊರು ಅಂತ ನಿಮ್ ತಲೇಲಿರ್ಲಿ ಅಂತ. ಇದ್ದಿದ್ ಮೂರೇ ಮೂರ್ ಟಿವಿ ಚಾನಲ್ ಅವಾಗ. ಡಿಸ್ಕವರಿ, ನ್ಯಾಷನಲ್ ಜಿಯೋಗ್ರಾಫಿಕ್ ಅಂದ್ರೇನು ಅಂತ ಗೊತ್ತೇ ಇರಲಿಲ್ಲ.
ಸಿಚುವೇಶನ್ ಹಿಂಗಿರುವಾಗ ಸಿಕ್ಕಿದ್ದು ಶಿವಣ್ಣ. ಅದೆಂಗ್ ಮಾತುಕತೆ ಶುರುವಾಯ್ತೋ ಗೊತ್ತಿಲ್ಲ. ಆದ್ರೆ ನಂಗ್ ತಲೇಲಿರೋ ಚಿತ್ರ ಅಂದ್ರೆ ಊರ್ ನಡುವೆ ಅಂದ್ರೆ ನಮ್ಮಜ್ಜಿ ಮನೆ ಮುಂದೆ ಇದ್ದ ಜಗ್ಗೋ ಬೋರಿಗೆ (hand pump) ಶಿವಣ್ಣ ಕೈ ಒರಗಿಸಿಕೊಂಡು ಮಾತಾಡ್ತಿದ್ದಿದ್ದು ಉಳಿದೋರೆಲ್ಲ ಸುತ್ತಾ ಕುತ್ಕೊಂಡು, ನಿಂತ್ಕೊಂಡು ಅವನ್ ಮಾತ್ ಕೇಳ್ತಿದ್ದಿದ್ದು. ಅದೇನು ವೈರಾಗ್ಯ ಬಂದಿತ್ತೋ ಏನ್ ಕತೇನೋ ಇದ್ದಿದ್ದ್ ಐದಾರೆಕ್ರೆ ಹೊಲ ಮಾರಿ ವರ್ಲ್ಡ್ ಟೂರ್ ಹೊರಟಿದ್ನಂತೆ ಶಿವಣ್ಣ. ಅಂತೂ ನಮ್ಮೂರವ್ನೊಬ್ಬ ಏರೋಪ್ಲೇನಾಗ್ ಹೋಗ್ತಾನೆ ಅಂತ ಹೆಮ್ಮೆ ಆಯ್ತು ಎಲ್ಲಾರ್ಗೂ. ಆದ್ರೆ ಶಿವಣ್ಣ ಅಲ್ಲಾಲ್ಲ ನಾನ್ ಹೋಗ್ತಿರೋದು ಸೈಕಲ್ ಮೇಲೆ ಅಂದಾಗ ಮಾತ್ರ ಎಲ್ಲಾರ್ಗೂ ಇವ್ನೆಲ್ಲೋ ಬುಲ್ಡೇ ಹೊಡಿತಿದಾನೆ ಅನಿಸ್ತು. ಶಿವಣ್ಣ ಮಾಮೂಲಿ ಸೈಕಲ್ ಅಲ್ಲ ಮುವತ್ತೈದ್ ಸಾವ್ರದ್ ಸೈಕಲ್ಲು ಅಂದಾಗ ಎಲ್ರಿಗೂ ಮತ್ತೆ ಕಿವಿ ನಿಗುರಿದ್ವು. ಅವಾಗಿನ್ ಕಾಲಕ್ಕೆ ಮುವತ್ತೈದ್ ಸಾವ್ರಕ್ಕೆ ಎಂತಾ ಬೈಕ್ ಬರ್ತಿತ್ತು ಲೆಕ್ಕ ಹಾಕ್ರಿ. ಕೆಲುವ್ರಿಗೆ ಇವ್ನಿಗ್ ಹುಚ್ ಹಿಡ್ದಿದೆ ಅನ್ಸಿರಬೇಕು. ಆದ್ರೆ ಶಿವಣ್ಣ ಮುಂದುಕ್ ಹೇಳ್ತಾ ಹೇಳ್ತಾ ಹೋದಂಗೆ ವಾತಾವರಣ ಬಿಗಿ ಏರ್ತಾ ಹೋಯ್ತು. ಸೈಕಲ್ ಅಂದ್ರೆ ನಮ್ ತಲೇಲಿದ್ದಿದ್ದು ಮಾಮೂಲಿ ಹರ್ಕ್ಯುಲಸ್ ಸೈಕಲ್ಲು. ಆದ್ರೆ ಅಂತ ಸೈಕಲಲ್ಲಿ ಯಾವನಾದ್ರು ಪ್ರಪಂಚ ಸುತ್ತಕಾಗತ್ತ. ಸೈಕಲಲ್ಲಿ ಭೂಮಿ ಸುತ್ತಿ ವಾಪಸ್ ಊರಿಗೆ ಬರೋ ಅಷ್ಟ್ರಲ್ಲಿ ನಾನು ಬದುಕಿರೋದೆ ಡೌಟು, ಬಂದ್ರೂ ನಿಮಗೆಲ್ಲ ಮಕ್ಳು ಮರಿ ಆಗಿ ಕೂದ್ಲು ಬೆಳ್ಳಗಾಗಿರ್ತವೆ ಅಂದ. ಅಷ್ಟು ವರ್ಷಕ್ಕೆ ಆಗೋ ಅಷ್ಟು ಸರಕನ್ನ ಮಾಮೂಲಿ ಸೈಕಲ್ ಮೇಲೆ ಒಯ್ಯೋಕೆ ಇದೇನ್ ಹೆಳವರು ಶಿರ್ಸಿಯಿಂದ ಹರಿಹರಕ್ ಬಂದಂಗಾ? ಒಪ್ಪತಕ್ಕದ್ದೇ ಅನಿಸ್ತು ಎಲ್ರಿಗೂ. ಮುವತ್ತೈದ್ ಸಾವ್ರದ್ ಸೈಕಲ್ಲು ಎಷ್ಟ್ ಸ್ಪೀಡಾಗಿ ಓಡ್ಬೋದು ಅಂತ ನನ್ ತಲೇಲಿ. ಶಿವಣ್ಣನ್ ಕತೆ ಮುಂದುವರೀತು. "ಆ ಸೈಕಲ್ಲಾಗ್ ಹಿಮಾಲಯ ದಾಟಕಾಗಲ್ಲ. ಯಾವ್ ಯಾವ್ದೋ ದೇಶದಲ್ಲಿ ಯಾವ್ ಯಾವ್ದೋ ಕಾಡುಮೇಡಲ್ಲಿ ಹೋಗ್ಬೇಕಾಗತ್ತೆ. ಬೇಟೆ ಪ್ರಾಣಿಗಳು ಮರದ್ ಮೇಲೆ ಹೊಂಚಾಕಿಕೊಂಡು ಗೋಣು ಮುರಿಯೋಕೆ ಕಾಯ್ತಿರ್ತವೆ. ಅಂತ ದಾರಿಲೆಲ್ಲ ಹೋಗಬೇಕಾಗತ್ತೆ. ನಾವು ಒಂದೈವತ್ತು ಜನರ ಟೀಂ ಜತೆಗೆ ಹೋಗ್ತೀವಿ. ಜಾಸ್ತಿ ಜನ ಒಟ್ಟಿಗೆ ಇದ್ರೆ ಸೇಫ್ ತಾನೆ. ಅಂತದಕ್ಕೆ ಅಂತಾನೆ ಆರ್ಡರ್ ಕೊಟ್ಟು ಮಾಡ್ಸೋ ಸೈಕಲ್ ಅದು"
ಒಂದೊಂದ್ ದೇಶದಲ್ಲಿ ಮನುಷ್ರನ್ನೇ ಹಿಡ್ಕೊಂಡು ತಿನ್ನೋ ನರಭಕ್ಷಕರು ಇದಾರಂತೆ. ನೀವಿನ್ನೂ ಹತ್ರ ಹೋಗಿ ಮಾತಾಡ್ಸೋದ್ರೊಳಗೆ ವಿಷದ ಬಾಣ ಊದಿ ಸಾಯ್ಸೇ ಬಿಟ್ಟಿರ್ತಾರಂತೆ. ಅದನ್ನೆಲ್ಲ ಹೆಂಗ್ ಎದ್ರುಸ್ತಿರ ಅಂತ ಕೇಳಿದ್ಕೆ ಗೊತ್ತಿಲ್ಲ ಅಂದ ಶಿವಣ್ಣ. ಅದಕ್ಕೇ ತಾನೆ ಹೋಗ್ತಿರೋದು. ತಿಳ್ಕಳಕೆ. ಒಕೆ. ಇನ್ನು ಕೆಲವು ಕಡೆ ರಾಜಕೀಯ ಗಲಭೆಗಳು, ಭಯೋತ್ಪಾದಕರ ಹಾವಳಿ ಇರತ್ತಂತೆ. ಇವರು ಹಂಗಾಸೇ ಹಾದು ಹೋಗಬೇಕಾಗಿರೋದ್ರಿಂದ ಅವರೆನ್ನಲ್ಲ ಪರಿಚಯ ಮಾಡ್ಕೊಂಡು ಅವರಿಗೆ ಕುಡಿಯಕೆ, ತಿನ್ನಕೆ ಕೊಟ್ಟು ಮುಂದುಕ್ ಹೋಗೋ ಅಂತ ಪರಿಸ್ಥಿತಿನೂ ಬರಬೋದಂತೆ. ಹಂಗೇ ಬಿನ್ ಲ್ಯಾಡೆನ್ ಜತೆಗೆ ಶಿವಣ್ಣ ಅನ್ನ ಸಾರು ತಿಂತಿರೋ ಚಿತ್ರ ಪಾಸಾಯ್ತು ಕಣ್ಮುಂದೆ.
ತಿನ್ನೋ ವಿಷ್ಯ ಬಂದಾಗ ಹೊಟ್ಟೆಗೆ ಏನು ಅನ್ನೋ ಪ್ರಶ್ನೆ ಬಂತು. ಸೈಕಲ್ ಕ್ಯಾರಿಯರಲ್ಲಿ ಏನ್ ಸೋನ ಮಸೂರಿ ಚೀಲ ಇಟ್ಕೊಂಡ್ ಹೋಗಕಾಗತ್ತ? ಶಿವಣ್ಣ ಹೇಳಿದ ಊಟಕ್ಕೆಲ್ಲ ಏನೂ ರೇಷನ್ ಒಯ್ಯಲ್ಲ. ದಾರೀಲಿ ಸಿಕ್ಕಿದ್ ಹಣ್ಣು ಹಂಪಲು ತಿಂದ್ಕೊಂಡ್ ಇರ್ತೀವಿ ಅಂತ. ಒಂದೊಂದ್ ವಿಷದ್ ಹಣ್ಣು, ಬೀಜಗಳು ಸಿಕ್ಬಿಟ್ರೆ? ಅದಕ್ಕೇ ಅಂತ ಹೋಗೋ ಮುಂಚೆ ಕ್ಲಾಸ್ ಮಾಡ್ತಾರಂತೆ ಏನ್ ತಿನ್ಬೋದು ಏನ್ ತಿನ್ಬಾರ್ದು, ಏನೂ ಇಲ್ದಲೆ ಹೆಂಗ್ ಬದುಕದು ಅಂತೆಲ್ಲ. ಹಿಂಗೇ ಶಿವಣ್ಣ ಒಂದೊಂದ್ ದೇಶದ್ ಬಗ್ಗೇನೂ ಹೇಳ್ತಾ ಅವರ ಊಟ, ತಿಂಡಿ, ಅವರು ಬದುಕೋ ರೀತಿ ಹೆಂಗೆ ನಮ್ ತರ ಇರಲ್ಲ, ಆಯಾ ದೇಶದಲ್ಲಿ ಇಂತಿಂತ ಕಾಡುಪ್ರಾಣಿಗಳ್ ಇರ್ತಾವೆ, ಆಫ್ರಿಕಾದಲ್ಲಿ ಬ್ಲಾಕ್ ಮಾಂಬಾ ಅಂತ ಹಾವು ಹೆಂಗೆ ಕಚ್ಚಿದ್ ಹತ್ ನಿಮ್ಷದಲ್ಲಿ ಸಾಯ್ಸೋ ಅಷ್ಟು ವಿಷಕಾರಿ. ಹೆಂಗೆ ಭೂಮಿ ಮೇಲ್ ಮೇಲಕ್ (north) ಹೋದಂಗೆ ನಮ್ಮೂರಲ್ಲಿರೋ ತರ ಸೂರ್ಯ ನೆತ್ತಿ ಮೇಲಿರಲ್ಲ ಒಂದ್ ಕಡೆ ಸೈಡಲ್ಲಿರ್ತಾನೆ, ಅಂತ ಕಡೆ ಬರೇ ಆರ್ ಗಂಟೆ ಕತ್ಲು, ಹದ್ನೆಂಟ್ ಗಂಟೆ ಹಗಲಿರತ್ತೆ ಅಂತೆಲ್ಲ ಹೇಳ್ದ.
ಭೂಮಿ ಮುಕ್ಕಾಲ್ ಭಾಗ ಸಮುದ್ರ ಐತಲ್ಲ ಅದೆಂಗ್ ಬರೇ ಸೈಕಲ್ಲಾಗೇ ಸುತ್ತೀರ ಅಂತ ಒಬ್ಬ ಬುದ್ವಂತ ಕೇಳ್ದ. ಅದಕ್ಕೆ ಶಿವಣ್ಣ ಎಲ್ಲಾ ಖಂಡಗಳು ಹೆಚ್ಚು ಕಮ್ಮಿ ಒಂದ್ಕೊಂದು ಕನೆಕ್ಟ್ ಆಗಿದಾವೆ, ಅಮೆರಿಕಾಕ್ ಹೋಗ್ಬೇಕಾದ್ರೆ ಮಾತ್ರ ಒಂದ್ ಕಡೆ ರಷ್ಯಾ-ಅಮೆರಿಕ ನಡುವೆ ಬೆರಿಂಗ್ ಸುಮುದ್ರ ಅಂತ ಬರತ್ತಂತೆ. ಅಲ್ಲಿ ಒಂದೈವತ್ ಕಿಲೋಮೀಟ್ರು ಸೈಕಲ್ನ ಹಡಗ್ನಾಗ್ ಹಾಕೊಂಡ್ ಹೋಗ್ಬೇಕಂತೆ. ಹಿಂಗೇ ಎರಡ್ ಗಂಟೇಲಿ ಎಲ್ರಿಗೂ ಇಡೀ ಭೂಮಿ ಸುತ್ತಾಕ್ಸಿದ ಶಿವಣ್ಣ. ಯಾರೂ ಜೋರಾಗ್ ಉಸ್ರೂ ಬಿಡ್ಲಿಲ್ಲ ಹಂಗ್ ಕೇಳಿದ್ರು. ಶಿವಣ್ಣ ಹೇಳಿದ್ದೆಲ್ಲ ಎಲ್ರ ತಲೇಲಿ ಪಿಚ್ಚರ್ ತರ ಓಡ್ತಾ ಇತ್ತು. ಕರ್ವಾಲೋ ತೇಜಸ್ವಿ ಮನೇಲಿ ಮಂದಣ್ಣ ಅವ್ರನ್ನೆಲ್ಲ ಕುಂದ್ರುಸ್ಕೊಂಡು ಸೃಷ್ಟಿಯ ಉಗಮ, ಡೈನೋಸಾರು, ಓತಿಕ್ಯಾತದ್ ಬಗ್ಗೆ ಹೇಳ್ತಾರಲ್ಲ. ಸೇಮ್ ಅದೇ ಸೀನ್.
ಇವಾಗ ಬ್ಲಾಕ್ ಹೋಲೂ, ಕ್ವಾಂಟಂ ಫಿಸಿಕ್ಸು, ಬಿಗ್ ಬ್ಯಾಂಗ್ ಬಗ್ಗೆ ಎಲ್ಲಾ ಕುತೂಹಲ ಹುಟ್ಟಿರೋದಕ್ಕೆ ಅವತ್ ಶಿವಣ್ಣ ಮಾತಾಡಿದ್ದೇ ಬೀಜ ಇರಬೇಕು. ಅವನು ಅವಾಗ್ಲೇ ದೇಹದಾನ ಅಂತ ಮಾಡಿದೀನಿ ನಾನ್ ಸತ್ಮೇಲೆ ಬಾಡಿನ ಮೆಡಿಕಲ್ ಕಾಲೇಜವ್ರು ತಗೊಂಡ್ ಹೋಗ್ತಾರೆ ಅಂದಿದ್ದ. ಅದಾದ್ಮೇಲೆ ಅವ್ನು ಕಾಣಲೇ ಇಲ್ಲ. ವರ್ಲ್ಡ್ ಟೂರ್ ಹೋದ್ನ ಅಂತಾನು ಗೊತ್ತಿಲ್ಲ. ಅವನ ಸಂಬಂಧಿಕರನ್ನ ಕೇಳಿದ್ರೆ ಏನಾದ್ರು ಗೊತ್ತಾಗಬಹುದು. ಟಾಮ್ ಹಾರ್ಡಿ- ಜಾಕ್ ನಿಕೋಲಸ್ ಹೈಬ್ರಿಡ್ ತರ ಇರೋ ಮುಖ, ಏಂಜಲೀನ ಜೋಲಿ ತುಟಿ, ಹಿಂದ್ಗಡೆ ಒಂದ್ ಪೋನಿ ಟೇಲ್ ಎಲ್ಲಾ ನಿನ್ನೆ ನೋಡಿರೋ ತರ ಐತೆ. ಇವಾಗ್ ಏನ್ ಮಾಡ್ತಿದಾನೆ ಅಂತ ಗೊತ್ತಾಗಿಬಿಟ್ರೆ ಶಿವಣ್ಣನ ಬಗ್ಗೆ ಇರೋ ಮಿಸ್ಟಿಕ್ ಹೋಗ್ಬಿಡತ್ತೆ. ಹಂಗಾಗಿ ಬ್ಯಾಡ.